ಬೆಂಗಳೂರು: 2019ರ ಲೋಕಸಭಾ ಚುನಾವಣೆ ಮತ ಎಣಿಕೆಗೆ ಸಂಬಂಧಿಸಿದಂತೆ ಜಿಲ್ಲಾ ಚುನಾವಣಾಧಿಕಾರಿ ಮಂಜುನಾಥ್ ಪ್ರಸಾದ್, ಪೋಲಿಸ್ ಆಯುಕ್ತ ಟಿ.ಸುನೀಲ್ ಕುಮಾರ್ ಜಂಟಿ ಸುದ್ದಿಗೋಷ್ಠಿ ನಡೆಸಿದರು. ಸುದ್ದಿಗೋಷ್ಠಿ ವೇಳೆ ಮಾತನಾಡಿದ ಮಂಜುನಾಥ್ ಪ್ರಸಾದ್, ನಗರದ ಮೂರು ಲೋಕಸಭಾ ಕ್ಷೇತ್ರಗಳ ಎಣಿಕೆ ಕಾರ್ಯಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿದ್ದೇವೆ. ಮೌಂಟ್ ಕಾರ್ಮೆಲ್ ಕಾಲೇಜು, ಸೆಂಟ್ ಜೋಸೆಫ್ ಕಾಲೇಜು, ಎಸ್ ಎಸ್ ಎಂ ಆರ್ ವಿ ಕಾಲೇಜಿನಲ್ಲಿ ಮತ ಎಣಿಕೆ ನಡೆಯಲಿದ್ದು ಎಣಿಕೆ ಕೇಂದ್ರಗಳಿಗೆ ಸಿಬ್ಬಂದಿಗಳಿಗೆ ಮೊಬೈಲ್ ಬಳಕೆಯ ಅನುಮತಿ ಇಲ್ಲ.
ಚುನಾವಣಾಧಿಕಾರಿ ಮತ್ತು ಮಾಧ್ಯಮದವರಿಗೆ ಮಾತ್ರ ಮೊಬೈಲ್ ಬಳಕೆಗೆ ಅನುಮತಿ ನೀಡಲಾಗಿದೆ. ಒಂದು ವಿಧಾನಸಭಾ ಕ್ಷೇತ್ರಕ್ಕೆ 14 ಟೇಬಲ್‍ಗಳ ವ್ಯವಸ್ಥೆ ಮಾಡಲಾಗಿದೆ. ಮತ ಎಣಿಕೆ ಹಾಲ್ ಒಳಗಡೆ ಪ್ರವೇಶಿಸಲು ಪ್ರತಿಯೊಬ್ಬರಿಗೆ ಐಡಿ ಕಾರ್ಡ್ ವ್ಯವಸ್ಥೆ ಮಾಡಲಾಗಿದೆ. ಮೂರು ಹಂತದಲ್ಲಿ ಚೆಕ್ ಮಾಡಿ ಒಳ ಬಿಡುತ್ತೇವೆ ಎಂದು ಚುನಾವಣಾಧಿಕಾರಿ ಮಂಜುನಾಥ್ ಪ್ರಸಾದ್ ಮಾಹಿತಿ ನೀಡಿದರು. ಮತ ಎಣಿಕೆ ಮುಗಿಯುವವರೆಗೂ ವೀಡಿಯೋ ಚಿತ್ರೀಕರಣ ಮಾಡಲಾಗುತ್ತೆ. ಅಭ್ಯರ್ಥಿಗಳ ಸಮ್ಮುಖದಲ್ಲೇ ಸ್ಟ್ರಾಂಗ್ ರೂಂ ಓಪನ್ ಮಾಡುತ್ತೇವೆ ಎಂದು ಮಂಜುನಾಥ್ ಪ್ರಸಾದ್ ಹೇಳಿದರು.
ಎಣಿಕೆ ಕಾರ್ಯಕ್ಕೆ ಸುಮಾರು 1500 ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. 100 ಮೀ ದೂರದವರೆಗೆ ಮೊಬೈಲ್ ಬಳಕೆಯನ್ನು ನಿಷಿಧಿಸಲಾಗಿದೆ. ಮಹದೇವಪುರ, ಬೊಮ್ಮನಹಳ್ಳಿ, ಕೆ.ಆರ್.ಪುರ, ಬ್ಯಾಟರಾಯನಪುರ ಯಶವಂತಪುರ ವಿಧಾನಸಭಾ ಕ್ಷೇತ್ರಗಳಿಗೆ 14ಕ್ಕಿಂತ ಹೆಚ್ಚಿನ ಟೇಬಲ್ ಅಳವಡಿಸಲಾಗಿದೆ. ಮತ ಎಣಿಕೆ ಹಾಲ್‍ನೊಳಗೆ ಅಭ್ಯರ್ಥಿಗಳು, ಏಜೆಂಟರ್ ಎಲ್ಲರೂ ಐಡಿ ಕಾರ್ಡ್‍ಗಳನ್ನು ಧರಿಸಬೇಕು. ಸ್ಟ್ರಾಂಗ್ ರೂಂ 7 ಗಂಟೆಗೆ ಓಪನ್ ಆಗಲಿದೆ. ಅಭ್ಯರ್ಥಿಗಳ ಸಮ್ಮುಖದಲ್ಲೇ ಸ್ಟ್ರಾಂಗ್ ರೂಂ ತೆರೆಯಲಾಗುತ್ತೆ. ಮೊದಲಿಗೆ ಪೋಸ್ಟಲ್ ಬ್ಯಾಲೆಟ್ ಎಣಿಕೆ ಆರಂಭಿಸಲಾಗುತ್ತೆ ಎಂದು ಮಂಜುನಾಥ್ ಪ್ರಸಾದ್ ಮಾಹಿತಿ ನೀಡಿದರು.