ಬೆಂಗಳೂರು : ಸಿಎಂ ಹೆಚ್‍ಡಿ ಕುಮಾರಸ್ವಾಮಿ ಮತ್ತೆ ಇವಿಎಂಗಳ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ಭಾನುವಾರ ಲೋಕಸಭಾ ಚುನಾವಣೆಗೆ ತೆರೆ ಬೀಳುತ್ತಿದ್ದಂತೆ ಎಕ್ಸಿಟ್ ಪೋಲ್ ಸಮೀಕ್ಷೆಗಳು ಹೊರಬಿದ್ದಿದ್ದು, ಬಿಜೆಪಿ ಈ ಬಾರಿಯೂ ಹೆಚ್ಚು ಸೀಟ್‍ಗಳನ್ನ ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದೆ. ಈ ಹಿನ್ನೆಲೆ ಕುಮಾರಸ್ವಾಮಿ, ಇವಿಎಂಗಳ ಮೇಲೆ ಅನುಮಾನ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.
ಮೋದಿ ಆಡಳಿತದಲ್ಲಿ ಇವಿಎಂಗಳ ಸತ್ಯಾಸತ್ಯತೆ ಬಗ್ಗೆ ಎಲ್ಲಾ ವಿರೋಧಪಕ್ಷಗಳು ಆತಂಕ ವ್ಯಕ್ತಪಡಿಸಿದ್ದವು. ಚುನಾವಣೆಗಳಲ್ಲಿ ಬ್ಯಾಲೆಟ್ ಪೇಪರ್ ಗಳ ಬಳಕೆಯಾಗಬೇಕೆಂದು ವಿರೋಧ ಪಕ್ಷಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಜಗತ್ತಿನಾದ್ಯಂತ ಮುಂದುವರಿದ ದೇಶಗಳು ಕೂಡ ಚುನಾವಣೆಗೆ ಸಾಂಪ್ರದಾಯಿಕ ಬ್ಯಾಲೆಟ್ ಪೇಪರ್ ಗಳನ್ನು ಬಳಸುತ್ತಿವೆ. ಈಗ ಆಡಳಿತ ಪಕ್ಷ ಇವಿಎಂ ದುರುಪಯೋಗಪಡಿಸಿಕೊಂಡಿದೆ ಎಂಬ ವಿರೋಧ ಪಕ್ಷಗಳ ಆತಂಕವನ್ನು ಭಾನುವಾರ ಬಂದ ಎಕ್ಸಿಟ್ ಪೋಲ್ ಸಮೀಕ್ಷೆ ಪುನರುಚ್ಛರಿಸಿದೆ ಎಂದು ಸಿಎಂ ಆರೋಪಿಸಿದ್ದಾರೆ.
ದೇಶದಲ್ಲಿ ಇನ್ನೂ ಮೋದಿ ಅಲೆ ಇದೆ ಎಂಬುದನ್ನು ಬಿಂಬಿಸಲು ಎಕ್ಸಿಟ್ ಪೋಲ್ ಸಮೀಕ್ಷೆಯನ್ನು ಬಳಸಿಕೊಳ್ಳಲಾಗುತ್ತಿದೆ. ಮೇ 23ರ ಬಳಿಕ ಏನಾದ್ರೂ ಹೆಚ್ಚು ಕಡಿಮೆಯಾದ್ರೆ ಯಾವುದಕ್ಕೂ ಇರಲಿ ಅಂತ ಬಿಜೆಪಿ ಸ್ಥಳೀಯ ಪಕ್ಷಗಳನ್ನು ಸೆಳೆಯಲು, ಕೃತಕವಾದ ಮೋದಿ ಅಲೆಯನ್ನು ಬಳಸಿಕೊಳ್ಳುತ್ತಿದೆ ಎಂದು ಕಿಡಿ ಕಾರಿದ್ದಾರೆ.
ಇಡೀ ಎಕ್ಸಿಟ್ ಪೋಲ್ ಕಸರತ್ತು, ಒಂದು ಪಕ್ಷ ಅಥವಾ ಒಬ್ಬ ನಾಯಕನ ಪರವಾಗಿ ಅಲೆ ಇದೆ ಎಂದು ಬಿಂಬಿಸಲು ನಡೆಸಿದ ಪ್ರಯತ್ನ. ಇದು ಕೇವಲ ಎಕ್ಸಿಟ್ ಪೋಲ್ ಅಷ್ಟೇ, ಎಗ್ಸಾಕ್ಟ್ ಪೋಲ್ ಅಲ್ಲ ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.