ಪ್ರಜಾಪ್ರಭುತ್ವದ ಅತಿದೊಡ್ಡ ಹಬ್ಬವಾದ ಲೋಕಸಭಾ ಚುನಾವಣೆ ದೇಶದಾದ್ಯಂತ ಒಟ್ಟು ಏಳು ಹಂತಗಳಲ್ಲಿ ನಡೆದಿದ್ದು, ಅಭ್ಯರ್ಥಿಗಳ ಭವಿಷ್ಯ ಈಗ ವಿದ್ಯುನ್ಮಾನ ಮತ ಯಂತ್ರಗಳಲ್ಲಿ ಅಡಗಿದೆ.
ಮತ ಎಣಿಕೆ ದಿನವಾದ ಮೇ 23ರ ಬೆಳಗ್ಗೆ 7 ಗಂಟೆಗೆ ಸ್ಟ್ರಾಂಗ್ ರೂಮ್ ಗಳ ಬಾಗಿಲು ತೆರೆದು ವಿದ್ಯುನ್ಮಾನ ಮತ ಯಂತ್ರಗಳನ್ನು ಎಣಿಕೆಗಾಗಿ ಪಡೆಯಲಾಗುತ್ತದೆ. 8 ಗಂಟೆಯಿಂದ ಮತ ಎಣಿಕೆ ಆರಂಭವಾಗಲಿದ್ದು, ಸೇವಾ ಮತ ಪತ್ರ, ಅಂಚೆ ಮತಪತ್ರ ಹಾಗೂ ವಿದ್ಯುನ್ಮಾನ ಯಂತ್ರಗಳಲ್ಲಿ ದಾಖಲಾಗಿರುವ ಮತಗಳ ಎಣಿಕೆ ಮಾಡಲಾಗುವುದು.
ಇದರ ಜೊತೆಗೆ ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ ಅನ್ವಯವಾಗುವಂತೆ ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಆಯ್ದ ಕೆಲವು ವಿವಿಪ್ಯಾಟ್ ಗಳ ಮತಗಳನ್ನು ಅಭ್ಯರ್ಥಿಗಳ ನಿಯೋಜಿತ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಚುನಾವಣಾಧಿಕಾರಿಗಳು ಎಣಿಕೆ ಮಾಡುವರು. ವಿವಿಪ್ಯಾಟ್ ಮತ ಎಣಿಕೆಯೂ ಇರುವ ಕಾರಣ ಈ ಬಾರಿಯ ಲೋಕಸಭಾ ಚುನಾವಣಾ ಫಲಿತಾಂಶ ಕೊಂಚ ವಿಳಂಬವಾಗಿ ಪ್ರಕಟವಾಗುವ ಸಾಧ್ಯತೆ ಇದೆ.
ಮೇ 23 ರಂದು ಮತ ಎಣಿಕೆ ಕಾರ್ಯ ನಡೆಯಲಿದ್ದು, ಅಲ್ಲಿಯವರೆಗೂ ವಿದ್ಯುನ್ಮಾನ ಮತ ಯಂತ್ರಗಳನ್ನು ಬಿಗಿ ಭದ್ರತೆಯಲ್ಲಿ ಸ್ಟ್ರಾಂಗ್ ರೂಂಗಳಲ್ಲಿ ಇರಿಸಲಾಗಿದೆ.