Friday, November 15, 2024
ಸುದ್ದಿ

ಶೇ.100ರಷ್ಟು ವಿವಿಪ್ಯಾಟ್ ತಾಳೆಗೆ ಸುಪ್ರೀಂನಲ್ಲಿ ವಿಪಕ್ಷಗಳು ಸಲ್ಲಿಸಿದ್ದ ಅರ್ಜಿ ವಜಾ..! – ಕಹಳೆ ನ್ಯೂಸ್

ನವದೆಹಲಿ,ಮೇ 21- ಲೋಕಸಭೆ ಚುನಾವಣೆ ಫಲಿತಾಂಶದ ವೇಳೆ ಶೇ.100ರಷ್ಟು ವಿವಿಪ್ಯಾಟ್(ಮತಹಕ್ಕು ಖಚಿತ ರಶೀದಿ)ಗಳನ್ನು ತಾಳೆ ಹಾಕಬೇಕೆಂದು ವಿರೋಧ ಪಕ್ಷಗಳು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ.

ಒಂದೆಡೆ ಇವಿಎಂಗಳನ್ನು ತಿರುಚಲಾಗುತ್ತದೆ ಎಂದು ಪ್ರತಿಪಕ್ಷಗಳು ನವದೆಹಲಿಯಲ್ಲಿ ಇಂದು ಕೇಂದ್ರ ಚುನಾವಣಾ ಆಯೋಗದ ಎದುರು ಪ್ರತಿಭಟನೆ ಕೈಗೊಂಡ ಬೆನ್ನಲ್ಲೇ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಅತ್ಯಂತ ಮಹತ್ವದ್ದಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಆಂದ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ನೇತೃತ್ವದ ಸುಮಾರು 21 ರಾಜಕೀಯ ಪಕ್ಷಗಳು ಹಾಗೂ ಚೆನ್ನೈ ಮೂಲದ ಟೀಚ್ ಫಾರ್ ಆಲ್ ಎಂಬ ಸಂಘಸಂಸ್ಥೆಯು, ವಿವಿಪ್ಯಾಟ್‍ನಲ್ಲಿರುವ ಶೇ.100ರಷ್ಟು ಮತಗಳನ್ನು ತಾಳೆ ಹಾಕಿ ನಂತರವೇ ಫಲಿತಾಂಶವನ್ನು ಘೋಷಣೆ ಮಾಡಲು ಆಯೋಗಕ್ಕೆ ಸೂಚನೆ ಕೊಡಬೇಕೆಂದು ಮೇಲ್ಮನವಿಯನ್ನು ಸಲ್ಲಿಸಿದ್ದವು.

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರತಿಪಕ್ಷಗಳ ಈ ಆರೋಪವನ್ನು ಸಾರಾ ಸಗಟಾಗಿ ತಳ್ಳಿಹಾಕಿದ್ದ ಚುನಾವಣಾ ಆಯೋಗ ಮತಯಂತ್ರಗಳನ್ನು ತಿರುಚಲು ಯಾರಿಂದಲೂ ಸಾಧ್ಯವಿಲ್ಲ. ಸಣ್ಣಪುಟ್ಟ ತಾಂತ್ರಿಕ ದೋಷ ಉಂಟಾಗಬಹುದೇ ಹೊರತು ಇವಿಎಂಗಳನ್ನು ತಿರುಚುವುದು ಅಷ್ಟು ಸುಲಭವಲ್ಲ ಎಂಬ ವಾದ ಮಂಡಿಸಿತ್ತು.

ಅಂತಿಮವಾಗಿ ಚುನಾವಣಾ ಆಯೋಗ ಮತ್ತು ಪ್ರತಿಪಕ್ಷಗಳ ನಡುವಿನ ವಾದ-ವಿವಾದವನ್ನು ಆಲಿಸಿದ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಅರುಣ್ ಮಿಶ್ರ ನೇತೃತ್ವದ ಪೀಠ ಅರ್ಜಿಯನ್ನು ವಜಾ ಮಾಡಿತು.

ಈಗಾಗಲೇ ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗಯ್ ನೇತೃತ್ವದ ಪೀಠ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ತೀರ್ಪು ನೀಡಿರುವುದರಿಂದ ಪುನಃ ನಾವು ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಅರ್ಜಿಯನ್ನು ಇತ್ಯರ್ಥಗೊಳಿಸಲಾಗಿದೆ.

ಈಗಾಗಲೇ ಮುಖ್ಯ ನ್ಯಾಯಮೂರ್ತಿಗಳು ಒಂದು ಬಾರಿ ತೀರ್ಪು ನೀಡಿರುವುದರಿಂದ ಪುನಃ ನಮ್ಮಿಂದ ತೀರ್ಪು ನೀಡಬೇಕೆಂದು ನಿರೀಕ್ಷೆ ಮಾಡುವುದು ಮೂರ್ಖತನ. ನಿಮ್ಮ ಅರ್ಜಿಯನ್ನು ವಜಾಗೊಳಿಸುತ್ತೇನೆಂದು ನ್ಯಾಯಮೂರ್ತಿ ಅರುಣ್ ಮಿಶ್ರ ಸ್ಪಷ್ಟಪಡಿಸಿದರು.

ಈ ಹಿಂದೆ ಇದೇ ಸುಪ್ರೀಂಕೋರ್ಟ್ ಪೀಠ ಪ್ರತಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಒಂದೊಂದು ವಿಧಾನಸಭಾ ಕ್ಷೇತ್ರಗಳ 5 ಮತಗಟ್ಟೆಗಳ ವಿವಿ ಪ್ಯಾಟ್‍ಗಳನ್ನು ತಾಳೆ ಹಾಕುವಂತೆ ಆಯೋಗಕ್ಕೆ ನಿರ್ದೇಶಿಸಿತ್ತು.

ಕನಿಷ್ಟ ಪಕ್ಷ ಶೇ.50ರಷ್ಟು ಈ ವಿವಿಪ್ಯಾಟ್‍ಗಳನ್ನು ತಾಳೆ ಹಾಕಬೇಕೆಂದು ಕೊನೆ ಕ್ಷಣದಲ್ಲಿ ವಿರೋಧ ಪಕ್ಷಗಳು ಮಾಡಿಕೊಂಡ ಮನವಿಯನ್ನೂ ಸಹ ಆಯೋಗ ಮನ್ನಣೆ ಮಾಡಲಿಲ್ಲ.

ಲೋಕಸಭೆ ಚುನಾವಣೆಯ ಅಂತಿಮ ಹಾಗೂ 7ನೇ ಸುತ್ತಿನ ಮತದಾನ ಮುಗಿಯುತ್ತಿದ್ದಂತೆ ವಿವಿಧ ಖಾಸಗಿ ಏಜೆನ್ಸಿಗಳು ನಡೆಸಿದ್ದ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಬಿಜೆಪಿ ನೇತೃತ್ವದ ಎನ್‍ಡಿಎ ಪುನಃ ಭಾರೀ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿದ್ದವು.

ಆದರೆ ಇದಕ್ಕೆ ಪ್ರತಿಪಕ್ಷಗಳು ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದವು. ಆಡಳಿತಾರೂಢ ಬಿಜೆಪಿ ಇವಿಎಂಗಳನ್ನು ತಮ್ಮ ಇಷ್ಟಕ್ಕೆ ತಕ್ಕಂತೆ ತಿರುಚುವ ಸಾಧ್ಯತೆ ಇದೆ ಎಂಬ ಅನುಮಾನವನ್ನು ವಿಪಕ್ಷಗಳು ವ್ಯಕ್ತಪಡಿಸಿದ್ದವು. ಆದರೆ ಆಯೋಗ ಇದನ್ನು ಸುತಾರಾಂ ಒಪ್ಪುತ್ತಿಲ್ಲ.