ತಾವು ಪಕ್ಷ ಬಿಡಲು ಸಿದ್ದ: ಶಾಸಕ ರೋಷನ್ ಬೇಗ್ ಕಾಂಗ್ರೆಸ್ ಪಕ್ಷದ ವಿರುದ್ಧ ಬಹಿರಂಗವಾಗಿ ವಾಗ್ದಾಳಿ – ಕಹಳೆ ನ್ಯೂಸ್
ಚುನಾವಣಾ ಫಲಿತಾಂಶಕ್ಕೆ ಇನ್ನೆರಡೇ ದಿನ ಬಾಕಿಯಿದ್ದು, ಈಗಾಗಲೇ ಮತದಾನೋತ್ತರ ಸಮೀಕ್ಷೆಯೂ ಹೊರ ಬಿದ್ದಿದೆ. ಈ ಸಮೀಕ್ಷೆಯಲ್ಲಿ ಎನ್‍ಡಿಎ ಮೈತ್ರಿಕೂಟ ಭರ್ಜರಿ ಜಯ ಸಾಧಿಸಲಿದೆ ಅಂತಾ ಹೇಳಲಾಗ್ತಿದೆ. ಇದು ರಾಜ್ಯದಲ್ಲಿರುವ ದೋಸ್ತಿ ಸರ್ಕಾರಕ್ಕೆ ಭಾರಿ ಆಘಾತವುಂಟುಮಾಡಿದೆ. ಸಮೀಕ್ಷೆ ಬೆನ್ನಲ್ಲೇ ಇದೀಗ ಕಾಂಗ್ರೆಸ್‍ನಲ್ಲಿ ಅಪಸ್ವರ ಕೇಳಿ ಬಂದಿದೆ.
ಶಾಸಕ ರೋಷನ್ ಬೇಗ್ ಕಾಂಗ್ರೆಸ್ ಪಕ್ಷದ ವಿರುದ್ಧ ಬಹಿರಂಗವಾಗಿ ವಾಗ್ದಾಳಿ ನಡೆಸಿದ್ದು, ಮುಸ್ಲಿಮರಿಗೆ ಪಕ್ಷ ಮನ್ನಣೆ ನೀಡುತ್ತಿಲ್ಲ. ಹೀಗಾಗಿ ತಾವು ಪಕ್ಷ ಬಿಡಲು ಸಿದ್ದ ಎಂದು ಹೇಳಿಕೆ ನೀಡಿದ್ದಾರೆ. ಇದು ಪಕ್ಷದಲ್ಲಿ ಅಲ್ಲೋಲಕಲ್ಲೋಲ ಉಂಟು ಮಾಡಿದೆ.
ಮಾಧ್ಯಮವೊಂದಕ್ಕೆ ಮಾತನಾಡಿದ ರೋಷನ್ ಬೇಗ್ “ಈ ಭಾರಿಯೂ ಎನ್‍ಡಿಎ ಮೈತ್ರಿಕೂಟ ಸರಳ ಬಹುಮತ ಪಡೆದು ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಈ ಸಮೀಕ್ಷೆಗಳ ಬಗ್ಗೆ ನನಗೇನು ಆಶ್ಚರ್ಯವಿಲ್ಲ. ಇನ್ನು ಕಾಂಗ್ರೆಸ್ ಈ ಬಾರಿ ಕಳಪೆ ಸಾಧನೆ ಮಾಡಲಿದೆ, ಇಲ್ಲಿನ ಬಹುತೇಕ ಸ್ಥಾನಗಳನ್ನು ಕಳೆದುಕೊಳ್ಳಲಿದೆ ಇದಕ್ಕೆ ರಾಜ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರೇ ಕಾರಣ” ಅಂತಾ ಆರೋಪಿಸಿದ್ದಾರೆ.
ಇದೇ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧವೂ ಹರಿಹಾಯ್ದ ರೋಷನ್ ಬೇಗ್ “ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರಾದ ಸಿದ್ದರಾಮಯ್ಯ ಕೂಡಾ ತಮ್ಮ ಜವಾಬ್ದಾರಿ ಸರಿಯಾಗಿ ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆ. ಇದರ ಪರಿಣಾಮದಿಂದ ಜನ ಮೈತ್ರಿ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದು, ಕಾಂಗ್ರೆಸ್ ಅನೇಕ ಸ್ಥಾನಗಳನ್ನು ಕಳೆದುಕೊಳ್ಳಲಿದೆ” ಅಂತಾ ಹೇಳಿದ್ದಾರೆ.
ಯಾವ ಲೋಕಸಭೆ ಚುನಾವಣೆ ವೇಳೆಯೂ ಇಷ್ಟು ಕಳಪೆ ಸಾಧನೆ ಕಾಂಗ್ರೆಸ್ ಮಾಡಿರಲಿಲ್ಲ. ಪಕ್ಷದ ಇಂದಿನ ಪರಿಸ್ಥಿತಿಗೆ ಕಾರಣ ಸಿದ್ದರಾಮಯ್ಯ ಮತ್ತು ದಿನೇಶ್ ಗುಂಡೂರಾವ್. ಹೀಗಾಗಿ ಅವರು ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡುವಂತೆ ರೋಷನ್ ಬೇಗ್ ಆಗ್ರಹಿಸಿದ್ದಾರೆ.