ವಿದೇಶ ಪ್ರವಾಸವನ್ನು ಮೊಟಕುಗೊಳಿಸಿ ವಾಪಸ್ ಬರಬೇಕೆಂದು ಕಾಂಗ್ರೆಸ್ ಹೈಕಮಾಂಡ್ ಡಿ.ಕೆ.ಶಿವಕುಮಾರ್ ರಿಗೆ ಸೂಚನೆ – ಕಹಳೆ ನ್ಯೂಸ್
ಬೆಂಗಳೂರು– ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುವ ಚಟುವಟಿಕೆಗಳು ಪ್ರಬಲವಾದರೆ ಕೂಡಲೇ ವಿದೇಶ ಪ್ರವಾಸವನ್ನು ಮೊಟಕುಗೊಳಿಸಿ ವಾಪಸ್ ಬರಬೇಕೆಂದು ಕಾಂಗ್ರೆಸ್ ಹೈಕಮಾಂಡ್ ಟ್ರಬಲ್‍ಶೂಟರ್ ಡಿ.ಕೆ.ಶಿವಕುಮಾರ್ ಅವರಿಗೆ ಸೂಚನೆ ನೀಡಿದೆ.
ಕುಟುಂಬ ಸಮೇತರಾಗಿ ವಿದೇಶ ಪ್ರವಾಸದಲ್ಲಿರುವ ಡಿ.ಕೆ.ಶಿವಕುಮಾರ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿರುವ ಎಐಸಿಸಿ ಪ್ರಧಾನಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು, ವಿದೇಶ ಪ್ರವಾಸವನ್ನು ಮೊಟಕು ಗೊಳಿಸುವ ಸಂದರ್ಭ ಬಂದರೆ ಹಿಂದೆ ಮುಂದೆ ನೋಡದೆ ತಕ್ಷಣ ವಾಪಸ್ ಬರಲು ಮಾನಸಿಕವಾಗಿ ಸಿದ್ಧರಾಗಿರಿ ಎಂದು ಮನವಿ ಮಾಡಿದ್ದಾರೆ ಎನ್ನಲಾಗಿದೆ. ಲೋಕಸಭೆ ಚುನಾವಣೆ ಮುಗಿದ ಬೆನ್ನಲ್ಲೇ ಸಚಿವ ಡಿ.ಕೆ.ಶಿವಕುಮಾರ್ ಅವರು ಒಂದು ವಾರ ಕಾಲ ಕುಟುಂಬ ಸಮೇತರಾಗಿ ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳಿದ್ದಾರೆ. ವಿದೇಶಕ್ಕೆ ತೆರಳುವ ಮುನ್ನ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಅವರಿಂದ ಅನುಮತಿಯನ್ನೂ ಡಿ.ಕೆ.ಶಿವಕುಮಾರ್ ಪಡೆದಿದ್ದರು ಎನ್ನಲಾಗಿದೆ.
ಆದರೆ, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳಿಸಲಿದೆ. ಮೈತ್ರಿಕೂಟಕ್ಕೆ ಹಿನ್ನಡೆಯಾಗಲಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಹೇಳಿವೆ. ಇದೇ ಸಂದರ್ಭ ಬಳಸಿಕೊಂಡು ಮತ್ತೊಮ್ಮೆ ಆಪರೇಷನ್ ಕಮಲ ನಡೆಸಿ ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸಲು ಬಿಜೆಪಿ ಮಾಸ್ಟರ್ ಪ್ಲಾನ್ ಮಾಡಿದೆ.
ಆ ಯೋಜನೆಯನ್ನು ಅನುಷ್ಠಾನಕ್ಕೆ ತರಲು ಕಾಂಗ್ರೆಸ್‍ನ ಬಂಡಾಯ ಶಾಸಕ ರಮೇಶ್ ಜಾರಕಿ ಹೊಳಿ ಅವರನ್ನು ಅಖಾಡಕ್ಕಿಳಿಸಿದ್ದು, ಕಳೆದೆರಡು ದಿನಗಳಿಂದ ಕಾಂಗ್ರೆಸ್‍ನ ಅತೃಪ್ತ ಶಾಸಕರನ್ನು ಸಂಪರ್ಕಿಸುವ ಪ್ರಯತ್ನ ಮಾಡುತ್ತಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮೇಲುಗೈ ಆದರೆ, ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆಗಳಾಗುವ ಸಾಧ್ಯತೆಗಳಿವೆ. ಆಪರೇಷನ್ ಕಮಲಕ್ಕೆ ಮಣಿದು ಬಹಳಷ್ಟು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರುವ ಸಾಧ್ಯತೆಗಳಿವೆ.
ಒಂದು ವೇಳೆ ಇದು ನಿಜವಾದರೆ ಸಮ್ಮಿಶ್ರ ಸರ್ಕಾರ ಪತನಕ್ಕೆ ಮುಹೂರ್ತ ನಿಗದಿಯಾಗಲಿದೆ. ಹೀಗಾಗಿ ಕಾಂಗ್ರೆಸ್ ಹೈಕಮಾಂಡ್ ಮುನ್ನೆಚ್ಚರಿಕೆ ಯಿಂದ ಪರಿಸ್ಥಿತಿಯ ಮೇಲೆ ನಿಗಾ ಇಡಲು ಕೆ.ಸಿ.ವೇಣುಗೋಪಾಲ್ ಅವರು ಇಂದು ಬೆಂಗಳೂರಿಗೆ ಆಗಮಿಸಿದ್ದಾರೆ. ಇಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಜತೆ ಸಭೆ ನಡೆಸಿ ಪಕ್ಷದ ಬಂಡಾಯ ಶಾಸಕ ರಮೇಶ್ ಜಾರಕಿಹೊಳಿ ಸಂಪರ್ಕದಲ್ಲಿ ಯಾರೂ ಇರದಂತೆ ನೋಡಿಕೊಳ್ಳುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.
ಈ ಹಂತದ ಪ್ರಯತ್ನದಲ್ಲೇ ಯಶಸ್ವಿಯಾದರೆ ಸಮ್ಮಿಶ್ರ ಸರ್ಕಾರಕ್ಕೆ ಯಾವುದೇ ಅಪಾಯವಿಲ್ಲ. ಇಲ್ಲದೇ ಹೋದರೆ ಆಪರೇಷನ್ ಕಮಲ ಚುರುಕಾಗಿ ನಡೆಯಬಹುದು ಅಥವಾ ರಾಜಕೀಯ ಬೆಳವಣಿಗೆಗಳಿಂದ ಬೇಸತ್ತು ಜೆಡಿಎಸ್ ಪಕ್ಷ ಮೈತ್ರಿಯಿಂದ ಹೊರ ಹೋಗಿ ಬಿಜೆಪಿ ಜತೆ ಸೇರಿ ಸರ್ಕಾರ ರಚಿಸಬಹುದು. ಇದ್ಯಾವುದೇ ಬೆಳವಣಿಗೆಗಳು ನಡೆದರೂ ಕಾಂಗ್ರೆಸ್‍ಗೆ ನಷ್ಟ ಉಂಟಾಗುತ್ತದೆ. ಶಾಸಕರ ಕುದುರೆ ವ್ಯಾಪಾರ ಆರಂಭಗೊಂಡರೆ ಅದನ್ನು ನಿಗ್ರಹಿಸಲು ಕರ್ನಾಟಕದಲ್ಲಿ ಡಿ.ಕೆ.ಶಿವಕುಮಾರ್ ಅನಿವಾರ್ಯ ಎಂಬ ಪರಿಸ್ಥಿತಿ ಇದೆ. ಹೀಗಾಗಿ ಹೈಕಮಾಂಡ್ ಡಿ.ಕೆ.ಶಿವಕುಮಾರ್ ಅವರನ್ನು ವಿದೇಶ ಪ್ರವಾಸದ ನಡುವೆಯೂ ನಮ್ಮೊಂದಿಗೆ ನಿರಂತರ ಸಂಪರ್ಕದಲ್ಲಿರಿ, ಸಂದರ್ಭ ಬಂದರೆ ರಾಜ್ಯಕ್ಕೆ ವಾಪಸಾಗಲು ಸಿದ್ದರಾಗಿರಿ ಎಂಬ ಸಂದೇಶ ನೀಡಿದೆ.