ಆರ್‌ಎಸ್‌ಎಸ್ ಮುಖಂಡ ಭಯ್ಯಾಜಿ ಜೋಶಿ ಅವರನ್ನು ಭೇಟಿ ಮಾಡಿ ಮಾತುಕತೆ, ನಿತಿನ್ ಗಡ್ಕರಿಗೆ ಬಿಜೆಪಿ ಅಧ್ಯಕ್ಷ ಪಟ್ಟ ಎಂಬ ವದಂತಿ – ಕಹಳೆ ನ್ಯೂಸ್
ನಾಗಪುರ: ಲೋಕಸಭೆ ಚುನಾಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಹೊರಬಿದ್ದ ಬೆನ್ನಲ್ಲೇ, ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ನಾಗಪುರದಲ್ಲಿರುವ ಆರ್‌ಎಸ್‌ಎಸ್ ಮುಖ್ಯ ಕಚೇರಿಯಲ್ಲಿ ಆರ್‌ಎಸ್‌ಎಸ್ ಮುಖಂಡ ಭಯ್ಯಾಜಿ ಜೋಶಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಆದರೆ, ಮಾತುಕತೆಯ ವಿವರಗಳನ್ನು ನೀಡಲು ನಿರಾಕರಿಸಿರುವ ಗಡ್ಕರಿ ಇದೊಂದು ಸೌಹಾರ್ದ ಭೇಟಿ ಎಂದು ಹೇಳಿದ್ದಾರೆ. ಆದರೆ, ಈ ಭೇಟಿ ರಾಜಕೀಯ ವಲಯದಲ್ಲಿ ನಾನಾ ಗುಸುಗುಸು ಹಬ್ಬಲು ಕಾರಣವಾಗಿದೆ. ಗಡ್ಕರಿ ಅವರನ್ನು ಬಿಜೆಪಿಯ ಮುಂದಿನ ರಾಷ್ಟ್ರೀಯ ಅಧ್ಯಕ್ಷರಾಗಿ ನೇಮಿಸುವ ಸಾಧ್ಯತೆ ಇದೆ ಎಂಬ ವದಂತಿಗಳು ಈ ಭೇಟಿಯ ಬಳಿಕ ಹಬ್ಬಿವೆ.
ಹೀಗಾಗಿ ಗಡ್ಕರಿ ಅವರ ಆಯ್ಕೆಗೆ ಪಕ್ಷದ ಹಿರಿಯ ನಾಯಕರು ಒಲವು ತೋರಿದ್ದಾರೆ ಎನ್ನಲಾಗಿದೆ. ಈ ಸಂದೇಶವನ್ನು ರವಾನಿಸಲೆಂದೇ ಆರ್‌ಎಸ್‌ಎಸ್ ನಾಯಕರು ಗಡ್ಕರಿ ಅವರನ್ನು ಆಹ್ವಾನಿಸಿದ್ದರು ಎಂದು ಮೂಲಗಳು ತಿಳಿಸಿವೆ.
ಬಿಜೆಪಿಯ ಹಾಲಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಮೂರು ವರ್ಷಗಳ ಅವಧಿ ಜನವರಿಯಲ್ಲೇ ಮುಕ್ತಾಯವಾಗಿದೆ. ಆದರೆ ಲೋಕಸಭಾ ಚುನಾವಣೆ ಮುಂದಿರುವಾಗ ಹೊಸ ಅಧ್ಯಕ್ಷರ ಆಯ್ಕೆ ಸರಿಯಲ್ಲ ಎನ್ನುವ ಕಾರಣಕ್ಕೆ ಸದ್ಯ ಅವರ ಅವಧಿಯನ್ನು ವಿಸ್ತರಿಸಲಾಗಿದ್ದು, ಹೊಸ ಸರ್ಕಾರ ರಚನೆಯಾದ ಬಳಿಕ ಹೊಸ ಅಧ್ಯಕ್ಷರನ್ನು ಬಿಜೆಪಿ ಆಯ್ಕೆ ಮಾಡಬೇಕಾಗಿದೆ.