ಬೆಂಗಳೂರು: ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ವಿರುದ್ಧ ಬೆಂಗಳೂರು ಕಾಂಗ್ರೆಸ್ ಶಾಸಕರು ಮತ್ತೆ ಅಸಮಾಧಾನ ಹೊರ ಹಾಕಿದ್ದಾರೆ ಎನ್ನಲಾಗಿದೆ.
ಬೆಂಗಳೂರು ಡೇರಿ ಅಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಡೆಯಬೇಕಿದ್ದು, ಕಾಂಗ್ರೆಸ್ ಪಕ್ಷದವರಿಗೆ ಅಧ್ಯಕ್ಷ ಸ್ಥಾನ ನೀಡಬೇಕಿತ್ತು. ಆದರೆ, ಸಿಎಂ ಕುಮಾರಸ್ವಾಮಿ ಕೊಟ್ಟ ಮಾತಿಗೆ ತಪ್ಪಿದ್ದಾರೆ ಎಂದು ಕೆಲವು ಕಾಂಗ್ರೆಸ್ ಶಾಸಕರು ಗರಂ ಆಗಿದ್ದಾರೆ.
ಬೆಂಗಳೂರು ಡೇರಿ ಅಧ್ಯಕ್ಷ ಸ್ಥಾನ ಬಿಟ್ಟುಕೊಡುವುದಾಗಿ ಸಿಎಂ ಭರವಸೆ ನೀಡಿದ್ದರು ಎನ್ನಲಾಗಿದೆ. ಆದರೆ, ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿದ್ದ ನರಸಿಂಹ ಮೂರ್ತಿ ಅವರನ್ನು ಡಿಸ್ಮಿಸ್ ಮಾಡಲಾಗಿದೆ.
ನಾಮಪತ್ರ ಸಲ್ಲಿಕೆಗೆ ಅವರಿಗೆ ಅವಕಾಶ ಇಲ್ಲದಂತಾಗಿದೆ. ಈ ಬೆಳವಣಿಗೆ ಹಿಂದೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮತ್ತು ಸಚಿವ ಹೆಚ್.ಡಿ. ರೇವಣ್ಣ ಅವರ ಕೈವಾಡವಿದೆ ಎಂದು ಆರೋಪಿಸಲಾಗಿದೆ. ಸಿಎಂ ಕುಮಾರಸ್ವಾಮಿ ಬೆಂಗಳೂರು ಡೇರಿ ವಿಚಾರದಲ್ಲಿಯೂ ಪ್ರತಿಷ್ಠೆ ಸಮರ ಮುಂದುವರೆಸಿದ್ದಾರೆ ಎಂದು ಕಾಂಗ್ರೆಸ್ ಶಾಸಕರು ದೂರಿದ್ದಾರೆನ್ನಲಾಗಿದೆ.
ಕಾಂಗ್ರೆಸ್ ಪಕ್ಷದವರಿಗೆ ಅಧ್ಯಕ್ಷ ಸ್ಥಾನ ನೀಡುವುದಾಗಿ ಮೊದಲಿಗೆ ಒಪ್ಪಿಕೊಂಡಿದ್ದ ಸಿಎಂ ಕುಮಾರಸ್ವಾಮಿ ರಾತ್ರೋ ರಾತ್ರಿ ನಿರ್ಧಾರ ಬದಲಿಸಿದ್ದು, ಕಾಂಗ್ರೆಸ್ ಶಾಸಕರ ಸಿಟ್ಟು ಕಟ್ಟಿಕೊಂಡಿದ್ದಾರೆ ಎನ್ನಲಾಗಿದೆ.