Sunday, November 24, 2024
ರಾಜಕೀಯಸುದ್ದಿ

ಸಮೀಕ್ಷೆ ನಿಜವಾದರೆ ಮತ್ತೆ 10 ವರ್ಷ ಮೋದಿ ಪಿಎಂ? – ಕಹಳೆ ನ್ಯೂಸ್

ನವದೆಹಲಿ: ಭಾರತದಲ್ಲಿ ಚುನಾವಣೋತ್ತರ ಸಮೀಕ್ಷೆಗಳು ಎಲ್ಲ ಕಾಲದಲ್ಲೂ ಸರಿಯಾದ ಫಲಿತಾಂಶವನ್ನೇ ನೀಡಿಲ್ಲ. ಹಲವಾರು ಚುನಾವಣೆಗಳಲ್ಲಿ ಕೆಲವೇ ಸಮೀಕ್ಷೆಗಳು ಮಾತ್ರ ನೈಜ ಫಲಿತಾಂಶಕ್ಕೆ ಹತ್ತಿರವಾಗಿದ್ದವು. ಅದರಲ್ಲೂ ಸಮಸ್ಯೆ ಎಂದರೆ, ಪ್ರತಿ ಬಾರಿಯೂ ಬೇರೆ ಬೇರೆ ಸಮೀಕ್ಷೆಗಳು ನಿಜವಾಗಿವೆ. ಜಗತ್ತಿನ ಇತ್ತೀಚಿನ ಚುನಾವಣೋತ್ತರ ಸಮೀಕ್ಷೆಗಳನ್ನು ನೋಡುವುದಾದರೆ, ಅಲ್ಲಿಯೂ ಅವುಗಳ ಊಹೆ ತಪ್ಪಾಗಿದ್ದೇ ಹೆಚ್ಚು. ಉದಾಹರಣೆಗೆ ಇತ್ತೀಚೆಗೆ ಆಸ್ಪ್ರೇಲಿಯಾ ಚುನಾವಣೆಯಲ್ಲಿ ಬಲಪಂಥೀಯ ಮೈತ್ರಿ ಅಧಿಕಾರಕ್ಕೆ ಬರುತ್ತದೆಂದು ಮೂರು ತಿಂಗಳಿಂದ ಸಮೀಕ್ಷೆಗಳು ಹೇಳುತ್ತಿದ್ದವು. ಆದರೆ ಈಗ ಬೇರೊಂದು ಪಕ್ಷ ಅಧಿಕಾರಕ್ಕೆ ಬಂದಿದೆ.

ಅಂದರೆ ಮತಗಳ ಹಂಚಿಕೆಯ ಅಂತರ ಕಡಿಮೆ ಇದ್ದಾಗ ಸಾರ್ವಜನಿಕ ಅಭಿಪ್ರಾಯ ಸಂಗ್ರಾಹಕನ ಲೆಕ್ಕಾಚಾರ ತಪ್ಪಾಗುವ ಸಾಧ್ಯತೆ ಹೆಚ್ಚಿರುತ್ತದೆ. ಇದೇ ಕಾರಣದಿಂದ ಸಮೀಕ್ಷೆಗಳ ಸ್ಯಾಂಪಲ್‌ ಆಯ್ಕೆಯಲ್ಲಿ ತಪ್ಪಾಗುತ್ತದೆ. ಹೀಗಾದಾಗ ಎಲ್ಲಾ ರಾಜ್ಯಗಳ, ಎಲ್ಲ ಸೀಟುಗಳನ್ನು ಒಟ್ಟುಗೂಡಿಸುವಾಗ ಫಲಿತಾಂಶದಲ್ಲಿ ಗಮನಾರ್ಹ ಬದಲಾವಣೆಯಾಗುವ ಸಾಧ್ಯತೆ ಇರುತ್ತದೆ. 2019ರ ಚುನಾವಣೋತ್ತರ ಸಮೀಕ್ಷೆಗಳೂ ಹೀಗೆ ಆಗಬಹುದೇ?

ಜಾಹೀರಾತು
ಜಾಹೀರಾತು
ಜಾಹೀರಾತು

ಸಮೀಕ್ಷೆ ವಿರುದ್ಧ ವಾದ ಮಾಡೋದು ಕಷ್ಟ

ಜಾಹೀರಾತು
ಜಾಹೀರಾತು
ಜಾಹೀರಾತು

ಈಗಿನ ಸಮೀಕ್ಷೆ ನೋಡುವುದಾದರೆ ಭಾರತದ ಹಲವು ಭಾಗಗಳಲ್ಲಿ ವೋಟ್‌ ಶೇರ್‌ ಅಂತರ ಹೆಚ್ಚಿದೆ. ಹಾಗಾಗಿ ಅಂಥ ದೋಷಗಳಾಗುವ ಸಾಧ್ಯತೆ ಕಡಿಮೆ ಎನ್ನುವುದು ನನ್ನ ವಾದ. ನಿರ್ದಿಷ್ಟವಾಗಿ ಉತ್ತರ, ಕೇಂದ್ರ, ಪಶ್ಚಿಮ ಭಾಗಗಳನ್ನು ಹೊರತುಪಡಿಸಿ ಮತ್ತು ಒಂದು ಅಥವಾ ಎರಡು ರಾಜ್ಯಗಳಲ್ಲಿ ಮತದಾನೋತ್ತರ ಸಮೀಕ್ಷೆಗಳು ನುಡಿದಿರುವ ಭವಿಷ್ಯದ ವಿರುದ್ಧ ವಾದ ಮಾಡುವುದು ಕಷ್ಟ. ಮೋದಿ ಈ ಪ್ರದೇಶಗಳಲ್ಲಿ ಆಳುತ್ತಿದ್ದಾರೆ ಮತ್ತು ಅಲ್ಲಿನ ಜನರ ಹೃದಯದ ಮೇಲೆ ಹಿಡಿತವಿಟ್ಟಿದ್ದಾರೆ. ಈ ಸಮಯದಲ್ಲಿ ಇದನ್ನು ಒಡೆಯಲು ಸಾಧ್ಯವಿಲ್ಲ. ನಾನೇನಾದರೂ ಮೋದಿಯಾಗಿದ್ದರೆ, ಇದೇ ಸಂಖ್ಯೆ ಮೇ 23ರ ಫಲಿತಾಂಶದಲ್ಲೂ ಬಂದರೆ ಇನ್ನೂ 5 ವರ್ಷ ಅಥವಾ 10 ವರ್ಷ ನಾನೇ ಅಧಿಕಾರದಲ್ಲಿರುತ್ತೇನೆಂದು ಹೇಳಿಕೊಳ್ಳುತ್ತೇನೆ!

ವೋಟ್‌ ಶೇರ್‌ ಅಂತರ ಅತ್ಯಂತ ನಿಕಟವಾಗಿರುವ ಸಾಕಷ್ಟುಕ್ಷೇತ್ರಗಳಲ್ಲಿ ಕುತೂಹಲಕಾರಿ ಫಲಿತಾಂಶ ಬರುವ ಸಾಧ್ಯತೆಯೂ ಇದೆ. ಉತ್ತರ ಪ್ರದೇಶ ದೇಶದ ಅತಿ ದೊಡ್ಡ ಮತ್ತು ರಾಜಕೀಯ ಪ್ರಾಮುಖ್ಯತೆ ಪಡೆದ ಪ್ರಮುಖ ರಾಜ್ಯ. ಈ ರಾಜ್ಯದ ಚುನಾವಣೋತ್ತರ ಸಮೀಕ್ಷೆಗಳ ಫಲಿತಾಂಶದಲ್ಲಿ ಬೃಹತ್‌ ಬದಲಾವಣೆ ಕಂಡುಬಂದಿರುವುದು ಅಚ್ಚರಿಯೇನೂ ಮೂಡಿಸಿಲ್ಲ. ಬಿಜೆಪಿ ಇಲ್ಲಿ 25 ಪಡೆಯುತ್ತದೋ ಅಥವಾ 65 ಪಡೆಯುತ್ತದೋ ಗೊತ್ತಿಲ್ಲ; ಆದರೆ ಅಂತಿಮ ಸಂಖ್ಯೆ ಮಾತ್ರ ಎನ್‌ಡಿಎಗೇ ಜಯ ಎಂದು ಹೇಳುತ್ತಿದೆ. ಆದರೆ ಉತ್ತರ ಪ್ರದೇಶದ ಎರಡು ಚುನಾವಣೆಗಳಲ್ಲಿ ಅಂದರೆ 2014 ಮತ್ತು 2017ರಲ್ಲಿ ಬಿಜೆಪಿಯ ಜಯದ ಮಾಪನ ಮತ್ತು ಅಂತರ ಪ್ರತಿಯೊಬ್ಬರಿಂದಲೂ ನಿರ್ಲಕ್ಷಿಸಲ್ಪಟ್ಟಿದ್ದವು. ಉತ್ತರದಲ್ಲಿ ಬಿಜೆಪಿ ಪ್ರದರ್ಶನವನ್ನು ಕಂಡೂ ನಾನು 2014ರ ಫಲಿತಾಂಶ ಮರುಕಳಿಸುತ್ತದೆ ಅಥವಾ 73 ಸೀಟು ಲಭ್ಯವಾಗುತ್ತದೆ ಎಂದುಕೊಂಡರೆ ನನ್ನಷ್ಟುಮೂರ್ಖ ಬೇರೊಬ್ಬನಿಲ್ಲ.

ಅಸಾಧ್ಯವಾಗಿದ್ದು ಸಾಧ್ಯವಾಗುತ್ತಾ?

ಮತ್ತೊಂದು ರಾಜ್ಯ ಪಶ್ಚಿಮ ಬಂಗಾಳ. ಆ್ಯಕ್ಸಿಸ್‌ ಪೋಲ್‌ನಲ್ಲಿ ಈ ರಾಜ್ಯದಲ್ಲಿ ಬಿಜೆಪಿ ಅರ್ಧಕ್ಕೂ ಹೆಚ್ಚಿನ ಸೀಟುಗಳನ್ನು ಗೆಲ್ಲಲಿದೆ ಎಂದು ಅಂದಾಜಿಸಲಾಗಿದೆ. ವೋಟ್‌ ಶೇರ್‌ನಲ್ಲೂ ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್‌ ಸಮ ಸಮ ಇರಲಿವೆ ಎಂದು ಹೇಳಲಾಗಿದೆ. ಇಂದು ಈ ರಾಜ್ಯದ ಮೇಲೂ ಒಂದು ಕಣ್ಣಿಡಬೇಕಾಗುತ್ತದೆ. ಒಂದು ವೇಳೆ ಉತ್ತರ ಪ್ರದೇಶದಲ್ಲಿ 2014ರ ಫಲಿತಾಂಶವೇ ಬಂದರೆ ಮತ್ತು ಬಂಗಾಳದಲ್ಲಿ ಬಿಜೆಪಿ ಡಜನ್‌ಗೂ ಹೆಚ್ಚಿನ ಸೀಟು ಪಡೆದುಕೊಳ್ಳಲು ಶಕ್ತವಾಗಿದ್ದರೆ 2014ರ ನಂಬರ್‌ ಬಹಶಃ ಸಿಗಬಹುದು. ಒಂದು ವೇಳೆ ಇದೆಲ್ಲಾ ಸಾಧ್ಯವಾದರೆ ಅಮಿತ್‌ ಶಾ ಅಸಾಧ್ಯವಾದುದನ್ನು ಸಾಧಿಸಿದಂತೆಯೇ ಸರಿ. ಆದರೆ ಇಲ್ಲಿಗೇ ಎಲ್ಲಾ ಮುಗಿದಿಲ್ಲ. ಇನ್ನೂ ನಿರ್ಣಾಯಕವಾಗಿರುವ 2 ಅಥವಾ 3 ಅತಿ ದೊಡ್ಡ ರಾಜ್ಯಗಳಲ್ಲಿನ ಫಲಿತಾಂಶದಲ್ಲಿ ಅನಿಶ್ಚಿತತೆ ಇದೆ.

ದೇಶದ ಎರಡನೇ ಅತಿ ದೊಡ್ಡ ರಾಜ್ಯ ಮಹಾರಾಷ್ಟ್ರದತ್ತ ಗಮನಹರಿಸುವುದಾದರೆ, ಎಲ್ಲಾ ಸಮೀಕ್ಷೆಗಳು ಬಿಜೆಪಿಗೆ ಸುಲಭ ಜಯ ಲಭಿಸುವುದಾಗಿ ಭವಿಷ್ಯ ನುಡಿದಿವೆ. ಇದು ನಿಜವಾದಲ್ಲಿ ಕಾಂಗ್ರೆಸ್‌ನ ಅತಿದೊಡ್ಡ ಹಿನ್ನಡೆ ಇದಾಗಲಿದೆ. ಈ ರಾಜ್ಯದಲ್ಲಿ ಆಡಳಿತಕ್ಕೆ ಕಾಂಗ್ರೆಸ್‌ ಪ್ರಬಲ ಪೈಪೋಟಿ ನೀಡುತ್ತಿದೆ. ಅದೂ ಅಲ್ಲದೆ ಅಲ್ಲಿನ ಗ್ರಾಮೀಣ ಭಾಗದ ಸಮಸ್ಯೆಗಳು ಕಾಂಗ್ರೆಸ್‌ನ ಪ್ರಚಾರಕ್ಕೆ ಪ್ರಮುಖ ವಸ್ತುವಾಗಿದ್ದವು. ಜೊತೆಗೆ ರಾಜ್‌ ಠಾಕ್ರೆ ಬಿಜೆಪಿ ಮತಗಳನ್ನು ಕಡಿಮೆ ಮಾಡುವ ಪ್ರಯತ್ನ ಮಾಡಿದ್ದು, ಕಾಂಗ್ರೆಸ್‌ಗೆ ನೆರವಾಗುವ ಸಾಧ್ಯತೆ ಇದೆ. ಅಲ್ಲಿನ ಬಿಜೆಪಿ ಮತ್ತು ಶಿವಸೇನ ಮೈತ್ರಿಯಲ್ಲೂ ಒಡಕುಗಳಿದ್ದವು. ಅದಕ್ಕಿಂತ ಹೆಚ್ಚಾಗಿ ಉತ್ತರ, ಪಶ್ಚಿಮ, ಮಧ್ಯ ಭಾರತಕ್ಕಿಂತ ಕಾಂಗ್ರೆಸ್‌ನ ತಳಮಟ್ಟದ ಸಂಘಟನೆ ಮಹಾರಾಷ್ಟ್ರದಲ್ಲಿ ಉತ್ತಮವಾಗಿದೆ. ಹೀಗಿದ್ದೂ ಸಮೀಕ್ಷೆಗಳು ನಿಜವಾದರೆ ಕಾಂಗ್ರೆಸ್‌ನ ಅತಿದೊಡ್ಡ ದುರಂತ ಇದಾಗುತ್ತದೆ.

ಕೈ ಸೀಟುಗಳೀಗ ಸಿಂಗಲ್‌ ಡಿಜಿಟ್‌ಗೆ

ಜನಾಭಿಪ್ರಾಯ ಸಮೀಕ್ಷೆಗಳು ಅನಾಮಿಕವಾದುವು. ಆದಾಗ್ಯೂ ಸಮೀಕ್ಷೆ ಬಳಿಕ ದೇಶದ ರಾಜಕಾರಣದಲ್ಲಿ ಸಾಕಷ್ಟುಬದಲಾವಣೆಯಾಗಿದೆ. 2004ರಲ್ಲಿ ಅಂದರೆ 15 ವರ್ಷ ಹಿಂದೆ ಕಾಂಗ್ರೆಸ್‌ ಪಡೆದಿದ್ದ ಸೀಟುಗಳು ಈಗ ಅನೇಕ ರಾಜ್ಯಗಳಲ್ಲಿ ಸಿಂಗಲ್‌ ಡಿಜಿಟ್‌ಗೆ ಬಂದಿಳಿದಿವೆ. ಬಂಗಾಳ ಮತ್ತು ತ್ರಿಪುರದಲ್ಲಿ ಬಿಜೆಪಿ ಪ್ರವರ್ಧಮಾನಕ್ಕೆ ಬರುತ್ತಿದೆ. ಕೇರಳ ಹೊರತುಪಡಿಸಿ ಇತರೆ ರಾಜ್ಯಗಳಲ್ಲಿ ಎಡಪಕ್ಷಗಳು ತಮ್ಮ ಸ್ಥಾನಮಾನವನ್ನು ಕಳೆದುಕೊಳ್ಳುತ್ತಿವೆ. ಈ ಬಾರಿ ಕೇರಳದಲ್ಲೂ ಎಡಪಕ್ಷಕ್ಕೆ ಹಿನ್ನಡೆಯಾದರೆ ರಾಷ್ಟ್ರರಾಜಕಾರಣದಲ್ಲಿ ಎಡಪಕ್ಷಗಳಿಗೆ ಅವಕಾಶವೇ ಇಲ್ಲದಂತಾಗುತ್ತದೆ. ಬಂಗಾಳದಲ್ಲಿನ ಬಿಜೆಪಿ ನೆಲೆಯೂರುವುದಕ್ಕೆ ತಡೆಯೊಡ್ಡಲು ಸಾಧ್ಯವಿಲ್ಲ. ದೆಹಲಿಯಲ್ಲಿ ಪ್ರತಿಸ್ಪರ್ಧೆ ಕಾಂಗ್ರೆಸ್‌ ಮತ್ತು ಆಪ್‌ ನೀಡಿದರೂ ಪ್ರಯೋಜನವಾಗುವ ಸೂಚನೆ ಇಲ್ಲ. ಜೊತೆಗೆ ಇಂದಿನ ಭಾರತಕ್ಕೆ ಬೇಕಾದ ಯುವ ನಾಯಕನನ್ನು ಸೃಷ್ಟಿಸಲು ಕಾಂಗ್ರೆಸಿಗರು ವಿಫಲರಾಗಿದ್ದಾರೆ. ಹೊರಗಿನಿಂದ ಬಂದ ಜಿಗ್ನೇಶ್‌ ಮೇವಾನಿಯಂತಹ ನಾಯಕರಿಗೆ ಅಧಿಕಾರದ ಏಣಿ ನೀಡಲೂ ಹಿಂದುಮುಂದು ನೋಡಿದ್ದಾರೆ. ಇದು ನನ್ನಲ್ಲಿ ಅನುಕಂಪ ಮೂಡಿಸುತ್ತಿದೆ.

ಕಾಂಗ್ರೆಸ್‌ನಂತೇ ಎಎಪಿ

ಕಾಂಗ್ರೆಸ್‌ ಜೊತೆಗೆ ಅತಿದೊಡ್ಡ ಹಿನ್ನಡೆ ಅನುಭವಿಸಬಹುದಾದ ಮತೊಂದು ಪಕ್ಷ ಆಮ್‌ ಆದ್ಮಿ. ಸಮೀಕ್ಷೆಗಳು ಸರಿಯಾಗಿದ್ದರೆ ಅದು ಅಬ್ಬಬ್ಬಾ ಎಂದರೆ ಒಂದು ಅಥವಾ ಎರಡು ಸೀಟು ಗೆಲ್ಲಬಹುದು. ತನ್ನದೇ ಆದ ಹಾಸ್ಯಾಸ್ಪದ ದುರಾಸೆ ಮತ್ತು ಅಹಂಕಾರವನ್ನು ಸಮರ್ಥಿಸುವ ಧಾವಂತದಲ್ಲಿ ಬಲಿಪಶುವಾದ ಪಕ್ಷ ಇದು. ಇದರ ಬಗ್ಗೆ ಹೆಚ್ಚೇನೂ ಹೇಳಬೇಕಿಲ್ಲ.

ಕೊನೆಯದಾಗಿ ಇನ್ನೊಂದು ಹೇಳಬೇಕು. ಈ ಬಾರಿಯ ಗೆಲುವೂ ಒಂದು ವೇಳೆ ಮೋದಿ ಅಲೆಯಿಂದಲೇ ದೊರಕಿದ್ದಾಗಿದ್ದರೆ 2014ರಲ್ಲಿ ಮೋದಿ ಏಕೆ ಗೆದ್ದರೆಂದು ಯುಪಿಎ ಹೇಳುತ್ತಿತ್ತೋ ಅಂತಹ ವಿತಂಡವಾದಕ್ಕೆ ಕಿವಿಗೊಡಬೇಕಾದ ಅಗತ್ಯ ಇರುವುದಿಲ್ಲ. ಅದೆಲ್ಲಾ ಸುಳ್ಳು ಎಂದು ಸಾಬೀತಾದಂತಾಗುತ್ತದೆ. ದೇಶದ ಇತರ ರಾಜಕಾರಣಿಗಳಿಗಿಂತ ಮೋದಿ ಚೆನ್ನಾಗಿ ದೇಶವನ್ನು ಮುನ್ನಡೆಸಬಲ್ಲರು ಎಂದು ದೇಶದ ಬಹುಸಂಖ್ಯಾತ ಜನರು ನಂಬುವುದು ಸಮೀಕ್ಷೆಗಳಿಂದ ದೃಢಪಟ್ಟಿದೆ. ಅದೇ ಕಾರಣಕ್ಕಾಗಿ 2014ರಲ್ಲಿ ಅವರು ಗೆದ್ದಿದ್ದರು ಮತ್ತು 2019ರ ಜಯಕ್ಕೂ ಇದೇ ಕಾರಣ ಇರಬಹುದು.