ಮಂಗಳೂರು: ಬಿಜೆಪಿ-ಕಾಂಗ್ರೆಸ್ ಮಧ್ಯೆ ನೇರ ಸ್ಪರ್ಧೆ ಇರುವ ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರದ ಮತ ಎಣಿಕೆ ಎನ್‌ಐಟಿಕೆಯಲ್ಲಿ ನಡೆಯುತ್ತಿದೆ.
ಅಂಚೆ ಮತ ಎಣಿಕೆ ಮುಗಿದ ಬೆನ್ನಿಗೇ ಇವಿಎಂಗಳ ಮತ ಎಣಿಕೆಯು 560 ಮತ ಎಣಿಕೆ ಸಿಬ್ಬಂದಿ ಮೂಲಕ ಆರಂಭಗೊಳ್ಳಲಿದೆ. ಪ್ರತಿ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಮುಗಿದ ಬಳಿಕ ತಲಾ ಐದು ವಿವಿಪ್ಯಾಟ್‌ಗಳ ಪರಿಶೀಲನೆ ನಡೆಯಲಿದೆ. ಫಲಿತಾಂಶವನ್ನು ಚುನಾವಣಾ ಆಯೋಗದ ಅಧಿಕೃತ ವೆಬ್‌ಸೈಟ್ ‘ಸುವಿಧಾ’ಗೆ ಅಪ್‌ಲೋಡ್ ಮಾಡುವ ಜತೆಯಲ್ಲೇ ಜಿಲ್ಲಾಧಿಕಾರಿ ಘೋಷಿಸಲಿದ್ದಾರೆ.
ಮತ ಎಣಿಕೆಯು ಎಂಟು ಹಾಲ್‌ಗಳಲ್ಲಿ 14 ಟೇಬಲ್‌ಗಳಲ್ಲಿ ನಡೆಯಲಿದೆ. ಸಿಸಿಟಿವಿಯೊಂದಿಗೆ ಸ್ಟ್ರಾಂಗ್ ರೂಂಗೆ 24/7 ಸಿಎಪಿಎಫ್ ಸಿಬ್ಬಂದಿ ಸರ್ಪಗಾವಲು ಇರಲಿದೆ. ಮಂಗಳೂರು ವಿಧಾನಸಭಾ ಕ್ಷೇತ್ರ- 15 ಸುತ್ತು, ಬಂಟ್ವಾಳ- 18, ಪುತ್ತೂರು- 16, ಸುಳ್ಯ – 17, ಬೆಳ್ತಂಗಡಿ- 18, ಮೂಡುಬಿದಿರೆ- 16, ಮಂಗಳೂರು ಉತ್ತರ- 18, ಮಂಗಳೂರು ದಕ್ಷಿಣ- 18 ಹೀಗೆ ವಿವಿಧ ಸುತ್ತಗಳಲ್ಲಿ ಮತ ಎಣಿಕೆ ನಡೆಯಲಿದೆ.
ನಿಷೇಧಾಜ್ಞೆ: ಮತ ಎಣಿಕೆ ಕಾರ್ಯ ಸುಸೂತ್ರವಾಗಿ ನಡೆಯಲು ಹಾಗೂ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ಮೇ 23 ರಂದು ಬೆಳಗ್ಗೆ 5ರಿಂದ ಮೇ 24ರಂದು ಬೆಳಗ್ಗೆ 5 ರವರೆಗೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ವಿಧಿಸಿ ಜಿಲ್ಲಾಧಿಕಾರಿ ಎಸ್. ಸಸಿಕಾಂತ್ ಸೆಂಥಿಲ್ ಆದೇಶಿಸಿದ್ದಾರೆ.
ನಿಷೇಧಿತ ಅವಧಿಯಲ್ಲಿ ಸಾರ್ವಜನಿಕರು ಐದು ಅಥವಾ ಅದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಮತ ಎಣಿಕೆ ಕೇಂದ್ರಗಳ ಆವರಣವನ್ನು ಹೊರತುಪಡಿಸಿ ಸಾರ್ವಜನಿಕ ರಸ್ತೆ, ಬೀದಿ, ಓಣಿಗಳಲ್ಲಿ ಸಾರ್ವಜನಿಕ ಸ್ಥಳ, ಸಾರ್ವಜನಿಕ ಕಟ್ಟಡ ಮತ್ತು ಸರ್ಕಾರಿ ಕಚೇರಿ ಸುತ್ತಮತ್ತ ಗುಂಪು ಸೇರುವುದನ್ನು ನಿಷೇಧಿಸಲಾಗಿದೆ. ಮಾರಕ ಆಯುಧಗಳನ್ನು , ದೈಹಿಕ ದಂಡನೆಗೆ ಕಾರಣವಾಗುವ ಅಥವಾ ಪೂರಕವಾಗುವ ಇನ್ಯಾವುದೇ ವಸ್ತುಗಳನ್ನು ಹೊಂದುವುದನ್ನು ಮತ್ತು ಸಾಗಾಟ ಮಾಡುವುದನ್ನು ನಿಷೇಧಿಸಿದೆ. ನಿಷೇಧಿತ ಅವಧಿಯಲ್ಲಿ ಯಾವುದೇ ವಿಜಯೋತ್ಸವ ವಾಹನಗಳನ್ನು ಉಪಯೋಗಿಸಿ ರ‍್ಯಾಲಿಯಲ್ಲಿ ಸಾರ್ವಜನಿಕ ಮೆರವಣಿಗೆ ಸಾರ್ವಜನಿಕ ರಾಜಕೀಯ ಸಭೆ ಸಮಾರಂಭಗಳನ್ನು ನಡೆಸುವುದನ್ನು ನಿಷೇಧಿಸಿದೆ. ಪಟಾಕಿಗಳನ್ನು ಸಿಡಿಸುವುದು ಯಾವುದೇ ಸ್ಪೋಟಕ ವಸ್ತುಗಳನ್ನು ಹೊಂದುವುದನ್ನು ನಿಷೇಧಿಸಿದೆ. ಸಾರ್ವಜನಿಕವಾಗಿ ಯಾವುದೇ ಕೂಗನ್ನು ಉಚ್ಚರಿಸುವುದು ಅಥವಾ ಪದ ಹಾಡುವುದು, ಚೇಷ್ಠೆ ಮಾಡುವುದು ಸಂಜ್ಞೆಗಳನ್ನು ಉಪಯೋಗಿಸುವುದು ಮತ್ತು ಚಿತ್ರಗಳ ಮೂಲಕ ಪ್ರದರ್ಶನ ಮಾಡುವುದು, ಪ್ರಕಟಣಾ ಪತ್ರಿಕೆಗಳ ಅಥವಾ ಇತರ ಯಾವುದೇ ವಸ್ತುಗಳ ಪ್ರದರ್ಶನ, ಭಿತ್ತಿಪತ್ರಗಳನ್ನು ಅಂಟಿಸುವುದರಿಂದ, ಸಭ್ಯತನ, ಸದಾಚಾರ ಸಾರ್ವಜನಿಕ ಭದ್ರತೆ ಶಿಥಿಲಗೊಳ್ಳುವಂತಹ ಯಾವುದೇ ರೀತಿಯ ಅಪರಾಧ ಅಥವಾ ಪ್ರೇರೇಪಿಸುವ ಕ್ರಮವನ್ನು ನಿಷೇಧಿಸಿಲಾಗಿದೆ.