ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ 1977ರಿಂದ ಇದುವರೆಗೆ ಜೆಡಿಎಸ್ ಗೆದ್ದಿದ್ದು ಬಿಟ್ಟರೆ ಉಳಿದಂತೆ ಕಾಂಗ್ರೆಸ್ ಪಾರುಪತ್ಯವಿದೆ. ಕಳೆದ ಎರಡು ಚುನಾವಣೆಗಳಲ್ಲಿ ಕಾಂಗ್ರೆಸ್‌ನ ಎಂ.ವೀರಪ್ಪ ಮೊಯ್ಲಿ ಸತತ ಗೆಲುವು ಸಾಧಿಸಿದ್ದಾರೆ.
ಚಿಕ್ಕಬಳ್ಳಾಪುರ ಕ್ಷೇತ್ರ ಮೊದಲಿಂದಲೂ ಕಾಂಗ್ರೆಸ್ ಭದ್ರಕೋಟೆಯಾಗಿದೆ. ಕ್ಷೇತ್ರದಲ್ಲಿ 1977ರಿಂದ ಈವರೆಗೂ ಒಂದು ಬಾರಿ(1996)ಜೆಡಿಎಸ್ ಗೆದ್ದಿದ್ದು ಬಿಟ್ಟರೆ ಉಳಿದಂತೆ ಕಾಂಗ್ರೆಸ್ ಪಾರುಪತ್ಯ ಸಾಧಿಧಿಸಿದೆ. ಪ್ರಸ್ತುತ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೊಳಪಡುವ ಒಟ್ಟು 8 ವಿಧಾನಸಭಾ ಕ್ಷೇತ್ರಗಳಲ್ಲಿ 5 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರೇ ಅಧಿಕಾರದಲ್ಲಿದ್ದಾರೆ. 2 ಕ್ಷೇತ್ರಗಳಲ್ಲಿ ಮಾತ್ರ ಜೆಡಿಎಸ್ ಶಾಸಕರಿದ್ದಾರೆ. ಕಳೆದ 10 ವರ್ಷಗಳಿಂದ ವೀರಪ್ಪ ಮೊಯ್ಲಿ ಅವರು ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಕ್ಷೇತ್ರ ಕಾಂಗ್ರೆಸ್ ಬತ್ತಳಿಕೆಯಲ್ಲೇ ಉಳಿದಿರುವುದರಿಂದ ಮೊಯ್ಲಿ ಅವರ ಹ್ಯಾಟ್ರಿಕ್ ಸ್ಪರ್ಧೆಗೆ ವೇದಿಕೆ ಸಜ್ಜಾಗಿದ್ದು, ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರಲ್ಲಿ ಹುರುಪು ತಂದಿದೆ.
ಕಳೆದ ಚುನಾವಣೆಯಲ್ಲಿ ಮೋದಿ ಅಲೆ ನಡುವೆಯೂ ಕಾಂಗ್ರೆಸ್ ಸಂಸದ ಮೊಯ್ಲಿ ಅವರು ಗೆಲುವು ಸಾಧಿಸಿದ್ದರು. ಇದಕ್ಕಿಂತ ಮುಖ್ಯವಾಗಿ ಕಳೆದ ಚುನಾವಣೆಯಲ್ಲಿ ತ್ರೀಕೋನ ಸ್ಪರ್ಧೆ ಇತ್ತು. ಈಗಿನ ಸಿಎಂ ಕುಮಾರಸ್ವಾಮಿಯವರೇ ಜೆಡಿಎಸ್‌ನಿಂದ ಸ್ಪರ್ಧಿಸಿದ್ದರು. ಬಿಜೆಪಿಯ ಬಿ.ಎನ್.ಬಚ್ಚೇಗೌಡ ದ್ವಿತೀಯ ಸ್ಥಾನಕ್ಕೆ ಬಂದಿದ್ದರು. ಆದರೆ ಈಗ ಪರಿಸ್ಥಿತಿ ಹಾಗಿಲ್ಲ. ಮೈತ್ರಿ ಒಪ್ಪಂದದ ಪ್ರಕಾರ ಮೊಯ್ಲಿಗೆ ಜೆಡಿಎಸ್ ನಾಯಕರ ಬೆಂಬಲವಿದೆ. ಎದುರಾಳಿ ಏನಿದ್ದರೂ ಬಿಜೆಪಿ ಅಭ್ಯರ್ಥಿ ಮಾತ್ರ. ಜೆಡಿಎಸ್ ಮತ್ತು ಕಾಂಗ್ರೆಸ್ ಮತಗಳು ಒಟ್ಟುಗೂಡುವುದರಿಂದ ಮೊಯ್ಲಿ ಅವರ ಗೆಲುವು ಸುಲಭವಾಗಲಿದೆ ಎನ್ನುವುದು ಕಾಂಗ್ರೆಸ್ ಮುಖಂಡರ ಲೆಕ್ಕಾಚಾರ.