ಬೆಂಗಳೂರು: ಕಾಂಗ್ರೆಸ್‌ನ ರಿಜ್ವಾನ್ ಅರ್ಷದ್ ಹಾಗೂ ಬಿಜೆಪಿಯ ಪಿಸಿ ಮೋಹನ್ ನಡುವೆ ನೇರ ಹಣಾಹಣಿ ನಡೆದಿದ್ದು ಇದುವರೆಗಿನ ಮತ ಎಣಿಕೆಯಲ್ಲಿ ರಿಜ್ವಾನ್ ಮುನ್ನಡೆ ಸಾಧಿಸಿದ್ದಾರೆ. ರಿಜ್ವಾನ್ 227018ಮತಗಳು ಹಾಗೂ ಪಿಸಿ ಮೋಹನ್ 201959 ಮತಗಗಳನ್ನು ಗಳಿಸಿದ್ದಾರೆ. ಪಕ್ಷೇತರ ಅಭ್ಯರ್ಥಿಯಾಗಿರುವ ನಟ ಪ್ರಕಾಶ್ ರೈಗೆ 10168 ಮತಗಳನ್ನು ಪಡೆದಿದ್ದು ಠೇವಣಿ ಕಳೆದುಕೊಳ್ಳುವ ಮುನ್ಸೂಚನೆ ನೀಡಿದ್ದಾರೆ.
ದೇಶದ ಕಾಸ್ಮೋಪಾಲಿಟಿನ್ ಕ್ಷೇತ್ರಗಳ ಪೈಕಿ ಒಂದಾದ ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರದಲ್ಲಿ ಬಹುಭಾಷಾ ಕಲಾವಿದ ಪ್ರಕಾಶ್ ರೈ ಸ್ಪರ್ಧಿಸುವ ಮೂಲಕ ಸಿನಿಮಾ ಕಳೆ ಬಂದಿದೆ. ಹಾಲಿ ಸಂಸದ ಪಿ.ಸಿ. ಮೋಹನ್ 3ನೇ ಬಾರಿಗೆ ಆರಿಸಿ ಬರುವ ತವಕದಲ್ಲಿದ್ದು, ಪ್ರಕಾಶ್ ರೈ ಸ್ಪರ್ಧೆಯಿಂದ ಬಿಜೆಪಿಗೆ ವರದಾನವಾಗಲಿದೆ ಎನ್ನುತ್ತಿದ್ದಾರೆ ರಾಜಕೀಯ ತಜ್ಞರು.
ಒಂದೆಡೆ ತಮಗೆ ಬೆಂಬಲ ನೀಡುವಂತೆ ಸ್ವತಃ ಪ್ರಕಾಶ್ ರೈ ಅವರೇ ಕಾಂಗ್ರೆಸ್‌ನ ಹಿಂದೆ ಬಿದ್ದಿದ್ದಾರೆ ಎಂಬ ವರದಿಗಳು ಬಂದಿದ್ದವು. ಇದೀಗ ಕಾಂಗ್ರೆಸ್ ಪಾಲಿಗೆ ಪ್ರಕಾಶ್ ರೈ ಸ್ಪರ್ಧೆಯೇ ಕಗ್ಗಂಟಾಗಿದೆ.
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಪ್ರಮುಖವಾಗಿ ರಾಜಾಜಿನಗರ, ಗಾಂಧಿನಗರ, ಶಿವಾಜಿನಗರ, ಶಾಂತಿನಗರ, ಸರ್ವಜ್ಞನಗರ, ಸಿವಿ ರಾಮನ್ ನಗರ, ಮಹಾದೇವಪುರ ಮತ್ತುಚಾಮರಾಜಪೇಟೆ ವಿಧಾನಸಭಾ ಕ್ಷೇತ್ರಗಳಿವೆ.
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರವು 2008ರಲ್ಲಿ ಕ್ಷೇತ್ರ ಪುನರ್ ವಿಂಗಡಣೆ ಬಳಿಕ ಸೃಷ್ಟಿಯಾಗಿತ್ತು. ನಂತರ ನಡೆದ ಎರಡು ಚುನಾವಣೆಗಳಲ್ಲೂ ಬಿಜೆಪಿ ಜಯಬೇರಿ ಬಾರಿಸಿತ್ತು. ನೂತನ ಕ್ಷೇತ್ರದ ಚೊಚ್ಚಲ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಹಿರಿಯ ಮುಖಂಡ ಎಚ್. ಟಿ. ಸಾಂಗ್ಲಿಯಾನಾ ವಿರುದ್ಧ ಪಿ.ಸಿ. ಮೋಹನ್ ಬಿಜೆಪಿಯಿಂದ ಆರಿಸಿ ಬಂದಿದ್ದರು. 2014ರಲ್ಲೂ ಜಯದ ಅಭಿಯಾನ ಮುಂದುವರಿಸಿದ್ದರು.