ಬೆಂಗಳೂರು: ರಾಜ್ಯದಲ್ಲಿ ಮತ್ತೆ ಯಡಿಯೂರಪ್ಪ ಸಿಎಂ ಆಗೋದನ್ನ ಜನ ನಿರೀಕ್ಷೆ ಮಾಡಿದ್ದಾರೆ. ಯಡಿಯೂರಪ್ಪ ಮತ್ತೆ ಸಿಎಂ ಆಗೋದು ಶತಸಿದ್ಧ ಎಂದು ಮಾಜಿ ಡಿಸಿಎಂ ಆರ್.ಅಶೋಕ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ದೇಶದ ಜನ ಮತ್ತೊಮ್ಮೆ ನರೇಂದ್ರ ಮೋದಿಯನ್ನ ಆಯ್ಕೆ ಮಾಡಿರೋದು ಸ್ಪಷ್ಟವಾಗಿದೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಬಿಜೆಪಿ ಅಲೆ ಪಸರಿಸಿದೆ. ಈ ಮೂಲಕ ಕಾಂಗ್ರೆಸ್ ಮುಕ್ತ ಭಾರತ ಆಗುತ್ತಿದೆ. ರಾಜ್ಯ ಮೈತ್ರಿ ಸರ್ಕಾರದ ಆಡಳಿತ ವೈಖರಿ ಏನು ಅನ್ನೋದು ಈಗ ಗೊತ್ತಾಗುತ್ತಿದೆ ಎಂದರು.
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಧೂಳಿಪಟ ಆಗುತ್ತಿರೊದು ಫಲಿತಾಂಶದಿಂದ ಕಾಣುತ್ತಿದೆ. ಮಂಡ್ಯದಲ್ಲಿ ಸುಮಲತಾ ಮುನ್ನಡೆ ಕಾಯ್ದುಕೊಂಡಿದ್ದಾರೆ. ಇನ್ನು ಕೋಲಾರದಲ್ಲಿ ಕೆ.ಹೆಚ್.ಮುನಿಯಪ್ಪ ಸೋಲಿನ ಹಂತಕ್ಕೆ ಬರುತ್ತಿದ್ದಾರೆ. ರಾಜ್ಯದ ಅಪವಿತ್ರ ಮೈತ್ರಿಗೆ ಜನರು ಬೇಸರ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಮತ್ತೆ ಯಡಿಯೂರಪ್ಪ ಆಡಳಿತವನ್ನ ಜನ ನಿರೀಕ್ಷೆ ಮಾಡಿದ್ದಾರೆ ಅಂತಾ ಹೇಳಿದರು.
ಕಳೆದ ಬಾರಿಗಿಂತ ಬಿಜೆಪಿ ಈ ಬಾರಿ ಹೆಚ್ಚು ಸ್ಥಾನ ಗೆಲ್ಲಲಿದೆ. ರಾಜ್ಯದಲ್ಲಿ ಮೈತ್ರಿ ಪಕ್ಷ ಧೂಳಿಪಟವಾಗಿದ್ದು, ಯಡಿಯೂರಪ್ಪ ಸಿಎಂ ಆಗೋದು ಶತಸಿದ್ಧ. ಯಾರು ಸಿಎಂ ಆಗೊದನ್ನ ತಪ್ಪಿಸಲು ಆಗಲ್ಲ. ರಾಜ್ಯದ ಜನ ನಮ್ಮ ಜತೆ ಇದ್ದಾರೆ. ಕರ್ನಾಟಕದ ಅಭಿವೃದ್ಧಿ ಯಡಿಯೂರಪ್ಪ ಅವರಿಂದ ಆಗಲಿದೆ. ಈ ಫಲಿತಾಂಶ ಜನರು ಯಡಿಯೂರಪ್ಪ ಸಿಎಂ ಆಗಲಿ ಎಂದು ಸಂದೇಶ ಸಹ ನೀಡಿದ್ದಾರೆ. ರಾಜ್ಯದ ಜನರಿಗೆ ಅಭಿನಂದನೆಗಳು ಎಂದರು.
ವಿರೋಧ ಪಕ್ಷಗಳ ನಾಯಕರು ಬಾಯಿ ಮೇಲೆ ಬೆರಳು ಇಡುವ ಸಂದರ್ಭ ಬಂದಿದೆ. ಕುಣಿಯಲಾಗದವರಿಗೆ ನೆಲ ಡೊಂಕು ಎಂಬ ಮಾತು ಇವರಿಗೆ ಹೋಲಿಕೆ ಆಗಲಿದೆ. ಮಹಾಘಟಬಂಧನ್ ಬಲಾಢ್ಯರು ಗೆದ್ದಾಗ ಇವಿಎಂ ಚೆನ್ನಾಗಿತ್ತು. ಈಗ ಚೆನ್ನಾಗಿಲ್ಲ ಅಂದ್ರೆ ಏನರ್ಥ. ರಾಜ್ಯದಲ್ಲಿ ಸಮಿಶ್ರ ಸರ್ಕಾರ ಬಂದಾಗ ಇವಿಎಂ ಸರಿ ಇತ್ತಾ? ಕಾಂಗ್ರೆಸ್ ಬಂದ್ರೆ ಇವಿಎಂ ಬ್ಯೂಟಿಫುಲ್. ಸೋಲನ್ನ ಮಾರ್ಯಾದೆಯಿಂದ ಒಪ್ಪಿಕೊಳ್ಳಿ, ಜನರ ತೀರ್ಪಿಗೆ ಕಾರಣ ನೀಡದೇ ಒಪ್ಪಿಕೊಳ್ಳಿ ಅಂತಾ ಹೇಳಿದರು.