Monday, January 20, 2025
ರಾಜಕೀಯಸುದ್ದಿ

ಹಳೆಗೇಟು ಶ್ರೀ ಕೇಶವ ಕೃಪಾದಲ್ಲಿ ವೇದ, ಯೋಗ, ಕಲಾ ಶಿಬಿರ ಸಮಾಪನ – ಕಹಳೆ ನ್ಯೂಸ್

ಸುಳ್ಯ: ಧರ್ಮ ಮತ್ತು ಸಂಸ್ಕೃತಿಯ ಉತ್ಪಾದಕರು ಋಷಿಗಳು ಮತ್ತು ತಪಸ್ವಿಗಳು. ಸಾತ್ವಿಕ ಸ್ಪಂದನ ಶಕ್ತಿಯ ತಪೋಭೂಮಿ ಮತ್ತು ಜಾಗೃತಿ ಚಿಂತನೆಯ ನಾಡಿದು. ಸಾತ್ವಿಕ ಚಿಂತನೆಯ ಸಮಷ್ಠಿ ಹಿಂದೂ ಧರ್ಮ. ಇಂತಹ ಧರ್ಮದ ನೆಲೆಯ ನಾಡಿನಲ್ಲಿ ಸಂಸ್ಕೃತ ಮತ್ತು ವೇದ ಉಳಿಯದಿದ್ದರೆ ಮುಂದೊಂದು ದಿನ ಇದನ್ನು ಅಂದು ಮಾಡಿಕೊಳ್ಳಬೇಕಾದ ಪರಿಸ್ಥಿತಿ ಬರಬಹುದು. ಹೀಗಾಗಿ ಪ್ರತಿ ಮನೆಗಳೂ ಸಂಸ್ಕಾರದ ಕೇಂದ್ರಗಳಾಗಿ ವೇದ ಮತ್ತು ಸಂಸ್ಕೃತವನ್ನು ಉಳಿಸುವ ಕಾರ್ಯ ಮಾಡಬೇಕು ಎಂದು ಸಂಪುಟ ನರಸಿಂಹ ಸುಬ್ರಹ್ಮಣ್ಯ ಮಠದ ಶ್ರೀ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ನುಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಸುಳ್ಯದ ಶ್ರೀ ಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ವತಿಯಿಂದ ಮಂಗಳವಾರ ಸಂಜೆ ನಡೆದ ಶ್ರೀ ಕೇಶವ ಕೃಪಾ ವೇದ ಯೋಗ ಮತ್ತು ಕಲಾ ಶಿಬಿರದ ಸಮಾಪನ ಸಮಾರಂಭ ಮತ್ತು ಶ್ರೀ ಕೇಶವಸ್ಮೃತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಸಂಸ್ಕೃತಿ ರಕ್ಷಣೆಯ ನಿಟ್ಟಿನಲ್ಲಿ ಕೇಶವಕೃಪಾ ಬೆಳಕಿನ ಗೋಪುರವಾಗಿದೆ. ಮಠ ಮಂದಿರಗಳಿಗಿಂತಲೂ ಹೆಚ್ಚು ಕೆಲಸ ಮಾಡಿವೆ ಎಂದು ಶ್ಲಾಘಿಸಿದ ಸುಬ್ರಹ್ಮಣ್ಯ ಶ್ರೀಗಳು ಪಾರಂಪರಿಕ ಆಚರಣೆಗಳಲ್ಲಿ ಮಹತ್ವ ಇದೆ. ಇಂತಹ ಆಚರಣೆಗಳನ್ನು ಉಳಿಸುವ ಕೆಲಸಗಳಾಗಬೇಕು ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ಕೃಷಿಕ ರಾಜಗೋಪಾಲ ಭಟ್ ಉಂಡೆಮನೆ ವಹಿಸಿದ್ದರು. ಪ್ರತಿವರ್ಷ ಪ್ರತಿಷ್ಠಾನದ ವತಿಯಿಂದ ವೇದ, ಯೋಗ ಮತ್ತು ಕಲಾ ಕ್ಷೇತ್ರದಿಂದ ಆರಿಸಿದ ಮೂವರು ಸಾಧಕರಿಗೆ ಶ್ರೀ ಕೇಶವ ಸ್ಮೃತಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುತ್ತಿದ್ದು ಈ ಬಾರಿ ವೈದಿಕ ಕ್ಷೇತ್ರದಿಂದ ಪುರುಷೋತ್ತಮ ಭಟ್ ದೇರ್ಕಜೆ, ಯೋಗ ಕ್ಷೇತ್ರದಿಂದ ಪ್ರಕಾಶ್ ಮೂಡಿತ್ತಾಯ, ಕಲಾ ಕ್ಷೇತ್ರದಿಂದ ಸ್ಯಾಕ್ಸೋಫೆನ್ ವಾದಕರಾದ ಬಾಲಚಂದ್ರ ಪೆರಾಜೆ ಇವರನ್ನು ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪ್ರಶಸ್ತಿ ಪ್ರದಾನ ಮಾಡಿದ ಪುತ್ತೂರಿನ ಸ್ವರ್ಣೋದ್ಯಮಿಗಳಾದ ಬಲರಾಮ ಆಚಾರ್ಯ ಮಾತನಾಡಿ, ಸಂಸ್ಕೃತಿ ಉಳಿದಿರುವುದು ವೇದ ಮತ್ತು ಸಂಸ್ಕೃತದ ಕಾರಣದಿಂದ. ಇದರ ಮೂಲಕ ಭಾರತದ ಅಂತಃಸತ್ವ ಬೆಳಗಿದೆ. ಇದನ್ನು ಮುಂದಿನ ಪೀಳಿಗೆಗೆ ದಾಟಿಸಲು ಇಂತಹ ಶಿಬಿರಗಳು ಕಾರಣವಾಗುತ್ತದೆ ಎಂದರು.

ಶಿಬಿರದ ಸಂಚಾಲಕ ಎಂ.ಎಸ್. ನಾಗರಾಜ ರಾವ್ ಪ್ರಸ್ತಾವನೆಗೈದು ಅಭಿನಂದನಾ ಭಾಷಣಗೈದರು. ವೇದಿಕೆಯಲ್ಲಿ ಪ್ರತಿಷ್ಠಾನದ ಗೌರವಾಧ್ಯಕ್ಷ ಗೋಪಾಲಕೃಷ್ಣ ಭಟ್ ವಗೆನಾಡು ಉಪಸ್ಥಿತರಿದ್ದರು.

ಪ್ರತಿಷ್ಠಾನದ ಅಧ್ಯಕ್ಷ ಪುರೋಹಿತ ನಾಗರಾಜ ಭಟ್ ಸ್ವಾಗತಿಸಿ, ಶ್ರೀವತ್ಸ ಭಾರದ್ವಾಜ್ ವಂದಿಸಿದರು. ಶ್ರೀದೇವಿ ನಾಗರಾಜ್ ಭಟ್ ಕಾರ್ಯಕ್ರಮ ನಿರೂಪಿಸಿದರು.

ನಟರಾಜ ಶರ್ಮ, ಸುದರ್ಶನ ಭಟ್, ಅಭಿರಾಮ ಶರ್ಮ ಮೊದಲಾದವರು ಸಹಕರಿಸಿದರು.
ಸಮಾರಂಭದಲ್ಲಿ ತೇಜಸ್ವಿ ನಾರಾಯಣ (ಯಜುರ್ವೇದ) ಶಶಾಂಕ್ ಭಟ್ (ಋಗ್ವೇದ) ಸರ್ವ ಪ್ರಥಮ ವಿದ್ಯಾರ್ಥಿಗಳಾಗಿ ಪುರಸ್ಕಾರ ಪಡೆದರು. ಅಸೀಮ ಅಗ್ನಿಹೋತ್ರಿ, ಅದ್ವೈತ್ ಅಗ್ನಿಹೋತ್ರಿ, ಅಭಿಷೇಕ್ ಭಟ್ ಪ್ರತಿಭಾ ಪುರಸ್ಕಾರ ಪಡೆದರು.