Tuesday, January 21, 2025
ಸುದ್ದಿ

ಪಿಯುಸಿಯಲ್ಲಿ ರಾಜ್ಯಕ್ಕೆ 3ನೇ ರ‍್ಯಾಂಕ್ ಪಡೆದ ಜಾಗೃತಿ ಜೆ. ನಾಯಕ್ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿಗೆ ಸೇರ್ಪಡೆ – ಕಹಳೆ ನ್ಯೂಸ್

ಪುತ್ತೂರು: ಈ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ತೃತೀಯ ರ‍್ಯಾಂಕ್ ಅನ್ನು ಪಡೆದ ಜಾಗೃತಿ ಜೆ. ನಾಯಕ್ ತನ್ನ ಉನ್ನತ ಶೈಕ್ಷಣಿಕ ಅಭ್ಯಾಸಕ್ಕಾಗಿ ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘ ಮುನ್ನಡೆಸುತ್ತಿರುವ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಶುಕ್ರವಾರ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಆಡಳಿತ ಮಂಡಳಿ ಸಮಕ್ಷಮದಲ್ಲಿ ಮುಂದಿನ ಇಂಜಿನಿಯರಿಂಗ್ ಶಿಕ್ಷಣಕ್ಕಾಗಿ ಜಾಗೃತಿ ತನ್ನ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಜಾಗೃತಿ ನಾಯಕ್ ತನ್ನ ಪಿಯು ಶಿಕ್ಷಣವನ್ನು ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಪಡೆದಿದ್ದು, ಪಿಯುಸಿ ಪರೀಕ್ಷೆಯಲ್ಲಿ 592 ಅಂಕಗಳೊಂದಿಗೆ ರಾಜ್ಯಕ್ಕೆ ತೃತೀಯ ಹಾಗೂ ಜಿಲ್ಲೆಗೆ ಪ್ರಥಮ ರ‍್ಯಾಂಕ್ ಅನ್ನು ಪಡೆದು ಸಾಧನೆಯನ್ನು ಮಾಡಿದ್ದಾರೆ. ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಸಾಧನೆ ಮಾಡುವ ಹಂಬಲವನ್ನು ಹೊಂದಿರುವ ಕಾರಣಕ್ಕಾಗಿ ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಶನ್ ವಿಷಯವನ್ನು ಆರಿಸಿಕೊಂಡಿದ್ದಾರೆ. ಈ ವಿಷಯಲ್ಲಿ ಹೆಚ್ಚು ಶ್ರಮವನ್ನು ವಹಿಸಿ ಉತ್ತಮ ಉದ್ಯೋಗವನ್ನು ಪಡೆಯಬೇಕೆಂಬ ಆಸೆಯನ್ನು ವ್ಯಕ್ತಪಡಿಸಿದ್ದಾರೆ..

ಜಾಹೀರಾತು
ಜಾಹೀರಾತು
ಜಾಹೀರಾತು

ಸಣ್ಣಂದಿನಿಂದ ಸ್ಪರ್ಧಾ ಮನೋಭಾವವನ್ನು ಹೊಂದಿರುವ ಈಕೆ ಶಾಲಾ-ಕಾಲೇಜು ಮಟ್ಟದ ರಸಪ್ರಶ್ನೆ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದುಕೊಳ್ಳುತ್ತಿದ್ದರು. ಶಿಕ್ಷಣದ ಜೊತೆಗೆ ಹವ್ಯಾಸ ಕ್ಷೇತ್ರವಾಗಿ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು 7 ವರ್ಷಗಳಿಂದ ಕಲಿಯುತ್ತಿರುವ ಇವರು ಈಗಾಗಲೇ ಜೂನಿಯರ್ ಗ್ರೇಡ್ ಮುಗಿಸಿದ್ದು ಸೀನಿಯರ್ ಹಂತದಲ್ಲಿದ್ದಾರೆ. ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ವಿದ್ವಾನ್ ಆಗಬೇಕೆಂಬ ಕನಸನ್ನು ಹೊಂದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರೌಢಶಾಲೆಯಿಂದ ತೊಡಗಿ ಪಿಯುಸಿ ಶಿಕ್ಷಣದ ತನಕ ವಿವೇಕಾನಂದ ಸಂಸ್ಥೆಯಲ್ಲಿ ವಿದ್ಯಾರ್ಜನೆ ಮಾಡಿದ್ದು, ಇಲ್ಲಿನ ಶೈಕ್ಷಣಿಕ ಬೋಧನೆ ಹಾಗೂ ಶಿಕ್ಷಣಕ್ಕೆ ಪೂರಕ ವಾತಾವರಣ ದೊರೆಯುವ ಕಾರಣಕ್ಕೆ ವಿವೇಕಾನಂದ ಸಂಸ್ಥೆಯನ್ನೇ ಮತ್ತೊಮ್ಮೆ ಆಯ್ಕೆ ಮಾಡಿಕೊಂಡಿದ್ದೇನೆ. ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂಬ ಆಸೆಯನ್ನು ಹೊಂದಿದ್ದೇನೆ.
– ಜಾಗೃತಿ ಜೆ. ನಾಯಕ್
————————

ರಾಜ್ಯದಲ್ಲೇ ರ‍್ಯಾಂಕ್ ಪಡೆದ ವಿದ್ಯಾರ್ಥಿನಿ ನಮ್ಮಲ್ಲಿ ಸೇರಿಕೊಳ್ಳುತ್ತಿರುವುದು ಅಪಾರ ಸಂತಸವನ್ನು ತಂದಿದೆ. ನಮ್ಮ ಸಂಸ್ಥೆಯಲ್ಲಿ ಉತ್ಕೃಷ್ಟ ಗುಣಮಟ್ಟದ ಶಿಕ್ಷಣ ಮತ್ತು ಪ್ರಾಯೋಗಿಕ ಅನುಭವ ಲಭ್ಯವಾಗುತ್ತಿದ್ದು. ಅನೇಕ ಕಂಪೆನಿ, ಸಂಸ್ಥೆಗಳಿಂದ ಉದ್ಯೋಗಾವಕಾಶಗಳು ಲಭ್ಯವಾಗುತ್ತಿವೆ. ಪರಿಣಾಮವಾಗಿ ಇಂಜಿನಿಯರಿಂಗ್ ಕೋರ್ಸ್‍ಗಾಗಿ ನಮ್ಮ ಸಂಸ್ಥೆಯನ್ನು ಆಯ್ದುಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ.
– ಸತೀಶ್‍ರಾವ್, ಅಧ್ಯಕ್ಷರು, ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು, ಪುತ್ತೂರು