ಬೀದರ್: ರಾಕಿಂಗ್ ಸ್ಟಾರ್ ಯಶ್ ತಮ್ಮ ಯಶೋಮಾರ್ಗ ಸಂಸ್ಥೆಯ ಮೂಲಕ ಬೀದರ್ ಜನತೆಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದಾರೆ. ಕಳೆದ ಮೂರು ದಿನಗಳಿಂದ ಯಶೋ ಮಾರ್ಗ ಸಂಸ್ಥೆಯ ಮೂಲಕ ಔರಾದ್‌ನ ಅನೇಕ ಹಳ್ಳಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡುತ್ತಿದ್ದಾರೆ. ನೀರು ಸಿಗದೇ ಪರದಾಡ್ತಾ ಇರೋ ಗ್ರಾಮಕ್ಕೆ 16 ಸಾವಿರ ಲೀಟರ್ ಸಾಮರ್ಥ್ಯದ ಬೃಹತ್ ಟ್ಯಾಂಕರ್ ಮೂಲಕ ನೀರು ಪೂರೈಸುತ್ತಿದ್ದಾರೆ. ಇನ್ನು ಗ್ರಾಮದ ಮಹಿಳೆಯರು ಕೂಡ ನೀರಿನ ಟ್ಯಾಂಕರ್‌ಗೆ ಪೂಜೆ ಸಲ್ಲಿಸಿ ಆರತಿ ಬೆಳಗಿ ನೀರು ತುಂಬಿಸಿಕೊಂಡಿದ್ದಾರೆ.
ಬೀದರ್‌ನಲ್ಲಿರುವ ಯಶ್ ಅಭಿಮಾನಿಗಳು ತೀವ್ರ ನೀರಿನ ಸಮಸ್ಯೆ ಇರೋ ಗ್ರಾಮಗಳನ್ನ ಗುರುತಿಸಿ ನೀರನ್ನು ಪೂರೈಕೆ ಮಾಡ್ತಾ ಇದ್ದಾರೆ. ಮೊನ್ನೆ ಅಷ್ಟೇ ರಾಕಿಭಾಯ್ ಸಂಸ್ಥೆ ‘ಯಶೋಮಾರ್ಗ’ದ ಮೂಲಕ ರಾಯಚೂರಿನ ಹಳ್ಳಿಗಳಿಗೆ ಟ್ಯಾಂಕರ್ಗಳ ಮೂಲಕ ಕುಡಿಯುವ ನೀರು ಸರಬರಾಜು ಮಾಡಿ, ಮೆಚ್ಚುಗೆಗೆ ಪಾತ್ರವಾಗಿತ್ತು. ಈಗ ಬೀದರ್ ಜಿಲ್ಲೆಗೂ ಯಶೋಮಾರ್ಗ ಸಂಸ್ಥೆ ನೀರು ಪೂರೈಕೆ ಮಾಡುತ್ತಿದೆ. ಕಳೆದ ಬಾರಿ ಕೊಪ್ಪಳದ ಕೆರೆ ಅಭಿವೃದ್ಧಿ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದ ಯಶ್, ಇದೀಗ ಬೀದರ್ ಹಾಗೂ ರಾಯಚೂರಿನಲ್ಲಿ ಉಚಿತ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದು, ಯಶ್ ಕಾರ್ಯಕ್ಕೆ ಬೀದರ್ ಜನರು ಹರ್ಷ ವ್ಯಕ್ತಪಡಿಸಿದ್ದಾರೆ.