ಮಂಗಳೂರು: ಲೋಕಸಭೆ ಚುನಾವಣೆಯಲ್ಲಿ ಆದ ಸೋಲಿನ ಕುರಿತು ಕಾಂಗ್ರೆಸ್ ವಿಮರ್ಶೆ ಮಾಡುತ್ತದೆ. ರಾಜ್ಯದಲ್ಲಿ ಮೈತ್ರಿ ಸರಕಾರ ಸುಭದ್ರವಾಗಿದೆ. ಬಿಜೆಪಿ ಒಂದು ವರ್ಷದಿಂದ ಸರ್ಕಾರ ಬೀಳಿಸಲು ಪ್ರಯತ್ನ ಮಾಡುತ್ತಿದೆ. ಅವರ ಪ್ರಯತ್ನ ಯಶಸ್ವಿ ಆಗುವುದಿಲ್ಲ ಎಂದು ಸಚಿವ ಯುಟಿ ಖಾದರ್ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಯುಟಿ ಖಾದರ್, 5ವರ್ಷಗಳ ಕಾಲ ಮೈತ್ರಿ ಸರಕಾರಕ್ಕೆ ಯಾವುದೇ ಆತಂಕ ಇಲ್ಲ ಎಂದರು. ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕೆಂಬ ಬಿ.ಸಿ ಪಾಟೀಲ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಖಾದರ್, ಕುಮಾರಸ್ವಾಮಿಯವರೇ 5 ವರ್ಷಗಳ ಕಾಲ ಸಿಎಂ ಆಗಿರುತ್ತಾರೆ. ಕಾಂಗ್ರೆಸ್ ಶಾಸಕರು ಪಕ್ಷಕ್ಕೆ ನಿಷ್ಟರಾಗಿದ್ದಾರೆ. ಬಿಸಿ ಪಾಟೀಲ್ ಹೇಳಿಕೆ ಸರಿಯಲ್ಲ. ಸದ್ಯ ನಾವು ರಾಹುಲ್ ಗಾಂಧಿ ಆದೇಶದಂತೆ ಮೈತ್ರಿ ಧರ್ಮ ಕಾಪಾಡುತ್ತೇವೆ ಅಂತ ಹೇಳಿದರು.
ಲೋಕಸಭೆ ಚುನಾವಣೆಯಲ್ಲಿ ಗೆದ್ದ ದಕ್ಷಿಣ ಕನ್ನಡ ಕ್ಷೇತ್ರದ ಸಂಸದ ನಳಿನ್ ಕುಮಾರ್ ಕಟೀಲು ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ರಾಜಕೀಯದಲ್ಲಿ ಸೋಲು ಶಾಶ್ವತ ಅಲ್ಲ, ಮತ್ತೆ ಜನರ ಸೇವೆ ಮಾಡುತ್ತೇವೆ. ಚುನಾವಣೆ ಗೆದ್ದಿರುವ ಪ್ರಧಾನಿ ಮೋದಿ ಅವರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಆದ್ರೆ ಈ ಬಾರಿಯಾದ್ರೂ ಜನರ ಖಾತೆಗೆ 15ಲಕ್ಷ ಹಣ ಬೀಳುವಂತಾಗಲಿ. ಬೆಲೆ ಏರಿಕೆ, ಡಾಲರ್ ರೇಟ್ ಕಡಿಮೆಯಾಗಿ ಆರ್ಥಿಕ ಪ್ರಗತಿ ಸಾಧಿಸಬೇಕು. ಕಳೆದ ಬಾರಿ ನೀಡಿದ ಆಶ್ವಾಸನೆ ಒಂದೂ ಈಡೇರಿಸಲು ಆಗಿಲ್ಲ, ಈ ಬಾರಿ ಆಶ್ವಾಸನೆ ಈಡೇರಿಸಲಿ. ಇನ್ನು ಮತ್ತೆ ಪುಲ್ವಾಮ ದಾಳಿ ರೀತಿ ಆಗುವುದು ಬೇಡ, ಸೈನಿಕರನ್ನು ಸ್ಥಳಾಂತರಿಸುವಾಗ ವಿಮಾನದಲ್ಲಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಕಳುಹಿಸಲಿ ಎಂದರು.