ಕೇರಳದಲ್ಲಿ ಉಗ್ರರ ಭೀತಿ ಹೆಚ್ಚಾಗಿದ್ದು. ಹೈಅಲರ್ಟ್ ಫೋಷಣೆ ಮಾಡಲಾಗಿದೆ. ಉಗ್ರರು ಕೇರಳ ರಾಜ್ಯಕ್ಕೆ ಬಂದಿದ್ದಾರೆ ಎಂದು ಕೇಂದ್ರ ಗುಪ್ತಚರ ಇಲಾಖೆಯಿಂದ ಮಾಹಿತಿ ನೀಡಿದ್ದು, ಕೇರಳ ಕರಾವಳಿ ತೀರದಲ್ಲಿ ಗಸ್ತು ತಿರುಗುವಂತೆ ಭದ್ರತಾ ಪಡೆಗಳಿಗೆ ತಿಳಿಸಲಾಗಿದೆ. ಶ್ರೀಲಂಕಾದಿಂದ ಉಗ್ರರು ಸಮುದ್ರ ಮಾರ್ಗವಾಗಿ ಕೇರಳಕ್ಕೆ ಆಗಮಿಸುತ್ತಿದ್ದಾರೆ ಎಂದು ಕೇಂದ್ರ ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.
ಗುಪ್ತಚರ ಇಲಾಖೆ ನೀಡಿದ ಮಾಹಿತಿಯ ಪ್ರಕಾರ, ಹದಿನೈದು ಇಸ್ಲಾಮಿಕ್ ಸ್ಟೇಟ್ ಉಗ್ರರು ಲಕ್ಷದ್ವೀಪದ ಮೂಲಕ, ದೇಶಕ್ಕೆ ನುಸುಳಲು ಶ್ರೀಲಂಕಾದಿಂದ ಹೊರಟಿದ್ದಾರೆ.
ಕೇರಳ ಪೊಲೀಸ್, ಕರಾವಳಿ ಭದ್ರತಾ ಪಡೆಗಳಿಗೆ ಮತ್ತು ಮೀನುಗಾರಿಕಾ ಬೋಟ್ ಗಳಿಗೆ ಈ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ಶ್ರೀಲಂಕಾದ ಅಧಿಕಾರಿಗಳು ಮೇ 23ರಂದು ನೀಡಿದ ಮಾಹಿತಿಯ ಪ್ರಕಾರ, ಈ ಕಟ್ಟೆಚ್ಚರವನ್ನು ನೀಡಲಾಗಿದೆ.
ಶ್ರೀಲಂಕಾ ಅಧಿಕಾರಿಗಳು ನೀಡಿದ ಎಚ್ಚರಿಕೆಯ ಪ್ರಕಾರ, ಹದಿನೈದು ಇಸ್ಲಾಮಿಕ್ ಸ್ಟೇಟ್ ಉಗ್ರರು ಬೋಟಿನ ಮೂಲಕ, ಲಕ್ಷದ್ವೀಪದತ್ತ ತೆರಳಿದ್ದಾರೆ.
ನಮ್ಮ ದೇಶದಲ್ಲಿ ನಡೆದ ಉಗ್ರರ ದಾಳಿಯ ನಂತರ, ನಾವು ಕಟ್ಟೆಚ್ಚರ ವಹಿಸಿದ್ದು, ಯಾವುದೇ ಶಂಕಯಾಸ್ಪದ ಚಟುವಟಿಕೆಯ ವಿರುದ್ದ ತೀವ್ರ ನಿಗಾವಹಿಸಿದ್ದೇವೆ ಎಂದು ಶ್ರೀಲಂಕಾದ ಅಧಿಕಾರಿಗಳು ಹೇಳಿದ್ದಾರೆ.
ಶ್ರೀಲಂಕಾದಲ್ಲಿ ನಡೆದ ಉಗ್ರರ ದಾಳಿಯ ನಂತರ ಕೇರಳದಲ್ಲಿ ಹೈಅಲರ್ಟ್ ನಲ್ಲಿ ಇರುವಂತೆ ಸೂಚಿಸಲಾಗಿದೆ. ರಾಷ್ಟ್ರೀಯ ಭದ್ರತಾ ಏಜೆನ್ಸಿ ನಡೆಸಿದ ತನಿಖೆಯ ಪ್ರಕಾರ, ಕೇರಳದಲ್ಲಿ ದಾಳಿ ನಡೆಸಲು ಉಗ್ರರು ಸಂಚು ರೂಪಿಸಿದ್ದಾರೆ.
ಏಪ್ರಿಲ್ 21ರಂದು ಶ್ರೀಲಂಕಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಸುಮಾರು 250ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು.