Monday, November 25, 2024
ರಾಜಕೀಯಸುದ್ದಿ

ಸಚಿವ ಪದವಿಯ ಆಸೆ ನನಗಿಲ್ಲ : ಹೆಚ್ಚಿನ ಅನುದಾನ ನೀಡುವಂತೆ ಪ್ರಧಾನಿಯಲ್ಲಿ ಮನವಿ : ಸಂಸದ ನಳಿನ್‍ಕುಮಾರ್ ಘೋಷಣೆ – ಕಹಳೆ ನ್ಯೂಸ್

ನನ್ನ ಪ್ರಾಮಾಣಿಕ ಹಾಗೂ ಸಜ್ಜನಿಕೆಯ ರಾಜಕಾರಣ ನನ್ನನ್ನು ಬೆಂಬಲಿಸಿದೆ. ಅಹಂಕಾರ, ಹಠ, ಜಾತಿಯ ರಾಜಕಾರಣ ಮಾಡದೆ ಸೇವಾ ಮನೋಭಾವನೆಯಿಂದ ರಾಜಕಾರಣ ಮಾಡುತ್ತೇನೆ. ನಾನು ಆಸೆ ಆಕಾಂಕ್ಷೆಗಳ ಹಿನ್ನಲೆಯಲ್ಲಿ ರಾಜಕಾರಣಕ್ಕೆ ಬಂದವನಲ್ಲ. ತತ್ವ ಸಿದ್ಧಾಂತದ ಆಧಾರಿತವಾಗಿ ರಾಜಕಾರಣದಲ್ಲಿದ್ದೇನೆ. ಹೀಗಾಗಿ ಯಾವುದೇ ಸಚಿವ ಪದವಿಯ ಆಕಾಂಕ್ಷಿಯಲ್ಲ. ನಾನು ಸಚಿವ ಸ್ಥಾನವನ್ನು ಅಪೇಕ್ಷೆ ಪಡುವುದಿಲ್ಲ. ಬದಲು ಕ್ಷೇತ್ರಕ್ಕೆ ಗರಿಷ್ಠ ಅನುದಾನ ನೀಡುವಂತೆ ಪ್ರಧಾನಮಂತ್ರಿಯವರಲ್ಲಿ ಮನವಿ ಮಾಡುತ್ತೇನೆ ಎಂದು ದಕ್ಷಿಣ ಕನ್ನಡ ಸಂಸದ ನಳೀನ್ ಕುಮಾರ್ ಕಟೀಲ್ ಹೇಳಿದರು.

ಲೋಕಸಭಾ ಕ್ಷೇತ್ರದ ಸದಸ್ಯರಾಗಿ ಪುನರಾಯ್ಕೆಗೊಂಡ ಬಳಿಕ ಪ್ರಥಮ ಬಾರಿಗೆ ಸುಳ್ಯಕ್ಕೆ ಆಗಮಿಸಿದ ಸಂದರ್ಭದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಈ ವಿಷಯ ಪ್ರಸ್ತಾಪಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಮಾಣಿ ಮೈಸೂರು ರಸ್ತೆಯ ಅಭಿವೃದ್ಧಿ, ಅರಂತೋಡು – ಮರ್ಕಂಜ – ಮಡಪ್ಪಾಡಿ – ಸುಬ್ರಹ್ಮಣ್ಯ ರಸ್ತೆಯ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ಕಾಂಞಂಗಾಡ್ ಕಾಣಿಯೂರು ರೈಲ್ವೇ ಮಾರ್ಗಕ್ಕೆ ಸಂಬಂಧಪಟ್ಟ ಹಾಗೆ ಸರ್ವೆ ಕಾರ್ಯಕ್ಕೆ ರಾಜ್ಯ ಒಪ್ಪಿಗೆ ನೀಡಬೇಕಿದ್ದು, ಈ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿಸಲಾಗುವುದು. ಇನ್ನಿತರ ಮೂಲಭೂತ ಸೌಕರ್ಯಗಳ ಕಡೆಯೂ ಗಮನ ಹರಿಸಲಾಗುವುದು. ದ.ಕ. ಲೋಕಸಭಾ ಕ್ಷೇತ್ರಕ್ಕೆ ಸಂಬಂಧಪಟ್ಟ ಹಾಗೆ ಹೊಸ ರೈಲ್ವೇ ವಿಭಾಗ ಆರಂಭಿಸಲು ಪ್ರಯತ್ನ ನಡೆಸಲಾಗುವುದು. ಧಾರ್ಮಿಕ ಮತ್ತು ಆರೋಗ್ಯ ಟೂರಿಸಮ್ ಕೈಗೆತ್ತಿಕೊಳ್ಳಲಾಗುವುದು. ಉದ್ಯಮಶೀಲತೆಗೆ ವಿಶೇಷ ಗಮನಹರಿಸಲಾಗುವುದು ಎಂದು ಕಟೀಲ್ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಧೂಳೀಪಟವಾಗಿದೆ. ದೇಶದಲ್ಲಷ್ಟೇ ಅಲ್ಲ, ರಾಜ್ಯದಲ್ಲಿ ಮತ್ತು ಜಿಲ್ಲೆಯಲ್ಲೂ ಕೂಡಾ ಕಾಂಗ್ರೆಸ್ ಮುಕ್ತವಾಗಿದೆ. ಈ ಬಾರಿ ಪ್ರತಿ ಮತಗಟ್ಟೆಗಳಲ್ಲೂ ಬಿಜೆಪಿಗೆ ಬಹುಮತ ಬಂದಿದೆ. ಜಿಲ್ಲೆಯಲ್ಲಿ 1991ರಿಂದಲೇ ಬಿಜೆಪಿಯ ವಿಜಯಯಾತ್ರ ಆರಂಭಗೊಂಡಿತು. ಈ ವಿಜಯಯಾತ್ರಗೆ ಸುಳ್ಯದ ಕೊಡುಗೆ ದೊಡ್ಡದು. ಸುಳ್ಯ ನನಗೆ ಶಕ್ತಿ ತುಂಬಿದ ಕ್ಷೇತ್ರ. ಕಾಂಗ್ರೆಸ್ ವಿರೋಧಿ ಕ್ಷೇತ್ರವಾಗಿ ಇದು ಬೆಳೆಯುತ್ತಿದೆ ಎಂದು ಹೇಳಿದರು.

ಶಾಸಕ ಎಸ್.ಅಂಗಾರ ಮಾತನಾಡಿ ಸುಳ್ಯದ 110 ಕೆವಿ ಸಬ್‍ಸ್ಟೇಷನ್ ಕಾಮಗಾರಿಗೆ ಸಂಬಂಧಪಟ್ಟು ಅರಣ್ಯ ಇಲಾಖೆಯಿಂದ ಅನುಮತಿ ದೊರೆತಿದ್ದು, ಆಗಸ್ಟ್ ಒಳಗೆ ಕಾಮಗಾರಿ ನಡೆಯಲಿದೆ. ಈ ಕಾಮಗಾರಿಯ ಲೈನಿಗೆ ಸಂಬಂಧಪಟ್ಟ ಹಾಗೆ ಅರಣ್ಯ ಇಲಾಖೆಯ ಅಡ್ಡಿ ನಿವಾರಣೆಯಾಗಿದೆ. ಇನ್ನೊಮ್ಮೆ ಅರಣ್ಯ ಇಲಾಖೆಯವರು ಸರ್ವೆ ನಡೆಸಿದ ತಕ್ಷಣ ಕಾಮಗಾರಿ ನಡೆಯಲಿದೆ ಎಂದು ಹೇಳಿದರು. ಇದರ ಜೊತೆಗೆ ಮಾಡಾವಿನ 33 ಕೆವಿ ಸಬ್‍ಸ್ಟೇಷನ್‍ನಲ್ಲಿ 2 ಟವರ್‍ ಗಳ ಕಾರ್ಯ ಆರಂಭಗೊಂಡಿದ್ದು, ಅರಣ್ಯ ಇಲಾಖೆಯ ಅನುಮತಿ ದೊರೆತ ತಕ್ಷಣ ಇನ್ನೆರಡು ಟವರ್‍ ಗಳ ಕಾಮಗಾರಿ ಕೂಡಾ ನಡೆಯಲಿದೆ ಎಂದು ಹೇಳಿದರು.

ತಾಲೂಕು ಪಂಚಾಯತ್ ಅಧ್ಯಕ್ಷ ಚನಿಯ ಕಲ್ತಡ್ಕ, ಜಿ.ಪಂ. ಸದಸ್ಯೆ ಪುಷ್ಪಾವತಿ ಬಾಳಿಲ, ಜಿ.ಪಂ. ಸದಸ್ಯ ಹರೀಶ್ ಕಂಜಿಪಿಲಿ, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ಮಾಜಿ ಜಿ.ಪಂ. ಸದಸ್ಯ ನವೀನ್‍ಕುಮಾರ್ ಮೇನಾಲ, ಬಿಜೆಪಿ ನಾಯಕರಾದ ಎ.ವಿ.ತೀರ್ಥರಾಮ, ಸುಬೋಧ್ ಶೆಟ್ಟಿ ಮೇನಾಲ, ಭಾಸ್ಕರ ರಾವ್ ಬಯಂಬು, ಭಾಗೀರಥಿ ಮುರುಳ್ಯ, ಸುರೇಶ್ ಕಣೆಮರಡ್ಕ, ವೆಂಕಟ್ರಮಣ ಮುಳ್ಯ, ವಿನುತಾ ಪಾತಿಕಲ್ಲು, ಅಬ್ದುಲ್ ಕುಂಞ ನೇಲ್ಯಡ್ಕ, ರಂಜಿತ್ ಪೂಜಾರಿ, ವಾಸುದೇವ ನಾಯಕ್, ನಾಗರಾಜ್ ಮುಳ್ಯ, ಮಹೇಶ್ ರೈ ಮೇನಾಲ, ರಾಜೇಶ್ ರೈ ಮೇನಾಲ, ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.