ಮಂಡ್ಯ : ಮಳೆ ನಿಂತರೂ ಮರದ ಹನಿ ನಿಂತಿಲ್ಲ ಎಂಬಂತೆ ಮಂಡ್ಯದಲ್ಲಿ ಚುನಾವಣೆ ನಡೆದು ಫಲಿತಾಂಶ ಹೊರಬಂದಿದ್ದರೂ ಚರ್ಚೆಗಳು ಮಾತ್ರ ನಿಂತಿಲ್ಲ. ಹೌದು ಮಂಡ್ಯ ಹೇಳಿ ಕೇಳಿ ಜೆಡಿಎಸ್‍ನ ಭದ್ರಕೋಟೆ. ಒಕ್ಕಲಿಗರೇ ಬಹು ಸಂಖ್ಯಾತರಾಗಿದ್ದರು. ಅವರು ಜೆಡಿಎಸ್ ಬೆಂಬಲಿಸಿದ್ದರೂ ಕೊನೆ ಗಳಿಗೆಯಲ್ಲಿ ಲಕ್ಷಾಂತರ ಮತದಿಂದ ಸ್ವತಂತ್ರ ಅಭ್ಯರ್ಥಿ ಸುಮಲತಾ ಹೇಗೆ ಗೆಲುವು ಪಡೆದರು ಎಂಬ ಪ್ರಶ್ನೆಗಳು ಹಲವರನ್ನು ಕಾಡತೊಡಗಿದೆ.
ಜೆಡಿಎಸ್‍ಗೆ ಒಕ್ಕಲಿಗರ ಮತಗಳೇ ವರದಾನ. ಇದರ ಜೊತೆಗೆ ಒಂದಷ್ಟು ಅಲ್ಪಸಂಖ್ಯಾತ, ಹಿಂದುಳಿದ, ದಲಿತರ ಬೆಂಬಲವೂ ಸೇರಿಕೊಂಡು ಗೆಲುವನ್ನು ಪಡೆಯಲು ಸಾಧ್ಯವಾಗಿದೆ. ಆದರೆ ಈ ಬಾರಿ ಮಂಡ್ಯದ ಚುನಾವಣೆಯಲ್ಲಿ ಇದ್ಯಾವ ಗಿಮ್ಮಿಕ್ಕು ನಡೆಯಲಿಲ್ಲ. ಇಲ್ಲಿನ ನಾಯಕರು ಸ್ವತಂತ್ರ ಅಭ್ಯರ್ಥಿ ಸುಮಲತಾ ಅವರನ್ನು ಸೋಲಿಸಲೇಬೇಕೆಂಬ ಹಠಕ್ಕೆ ಬಿದ್ದರಲ್ಲದೆ, ಮಂಡ್ಯದಲ್ಲಿ ಒಕ್ಕಲಿಗರ ಮತಗಳನ್ನು ಸೆಳೆಯುವ ಗುಂಗಲ್ಲಿ ಇತರ ವರ್ಗದ ಜನರನ್ನು ಕಡೆಗಣಿಸಲು ಆರಂಭಿಸಿದರು. ಇದು ಜೆಡಿಎಸ್‍ಗೆ ಪ್ಲಸ್ ಪಾಯಿಂಟ್ ಆಗೋ ಬದಲು ಸುಮಲತಾ ಅವರಿಗೆ ಲಾಭ ತಂದು ಕೊಟ್ಟಿತು.
ಚುನಾವಣೆಯ ಆರಂಭದಿಂದಲೂ ಜೆಡಿಎಸ್‍ನವರು ಜಾತಿ ವಿಚಾರ ಕೆಲಸ ಮಾಡಬಹುದು ಅಂದುಕೊಂಡು ಜಾತಿಯನ್ನು ಎಳೆದು ತಂದರು. ಆದರೆ ಜೆಡಿಎಸ್ ತಂತ್ರ ಎಲ್ಲೋ ಒಂದು ಕಡೆ ಮುಳುವಾಗತೊಡಗಿತು. ಒಕ್ಕಲಿಗರು ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಗಟ್ಟಿಯಾಗಿ ನಿಲ್ಲುತ್ತಿದ್ದಾರೆ ಎಂಬುದು ಅರಿವಾಗುತ್ತಿದ್ದಂತೆಯೇ ಒಕ್ಕಲಿಗರೇತರರು ಸ್ವತಂತ್ರ ಅಭ್ಯರ್ಥಿಯತ್ತ ಒಲವು ತೋರತೊಡಗಿದರು.
ಆದ್ರೆ ಇದಾವುದು ಜೆಡಿಎಸ್‍ಗೆ ತಿಳಿಯದೆ ಹತ್ತಾರು ತಂತ್ರಗಳನ್ನ ಒಳಗೊಳಗೆ ಮಾಡತೊಡಗಿದರು. ಆದ್ರೆ ಈ ಯೋಜನೆಗಳೇ ಜೆಡಿಎಸ್ ಸೋಲಿಗೆ ಕಾರಣವಾಯಿತು. ಒಟ್ಟಿನಲ್ಲಿ ಒಕ್ಕಲಿಗರ ಮತ ಮಂಡ್ಯದಲ್ಲಿ ಕೆಲಸ ಮಾಡಿದೆ ಅನ್ನೊದು ಮರೆಯೋವಂತಿಲ್ಲ. ಇದರಿಂದಾಗಿ ಸುಮಲತಾ ಗೆಲುವಿನ ಗದ್ದುಗೆ ಏರಲು ಸಹಾಯಕವಾಯಿತು.