ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪಿ.ಯು.ಸಿ ವಿಜ್ಞಾನ, ಕಲಾ, ವಾಣಿಜ್ಯ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಮತ್ತು ಹೆತ್ತವರ ಸಮಾವೇಶ – ಕಹಳೆ ನ್ಯೂಸ್
ಶಿಕ್ಷಣದ ನಿಜವಾದ ಅರ್ಥವನ್ನು ವ್ಯಕ್ತಪಡಿಸಲು ಮೂಡಿ ಬಂದ ವಿವೇಕಾನಂದ ಸಮೂಹ ಸಂಸ್ಥೆಗಳು ಜೀವನ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಲು ಸಹಾಯ ಮಾಡುತ್ತವೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಭಾರತೀಯ ಸಂಸ್ಕೃತಿಯನ್ನು ರೂಪಿಸುವ ರೂವಾರಿಗಳಾಗಬೇಕು. ಮನುಷ್ಯನೊಳಗಿನ ರಾಕ್ಷಸೀಯ ಪ್ರವೃತ್ತಿಯನ್ನು ನಾಶಮಾಡಿ ದೈವೀಶಕ್ತಿಯನ್ನು ಸಾಕ್ಷಾತ್ಕರಿಸಬೇಕು ಎಂದು ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ರವೀಂದ್ರ ಪಿ ಹೇಳಿದರು.
ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಜರಗಿದ ಪ್ರಥಮ ಪಿ.ಯು.ಸಿ ವಿಜ್ಞಾನ, ಕಲಾ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಮತ್ತು ಹೆತ್ತವರ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ಕಾಲೇಜಿನ ಅಂದ ಚಂದ ನೋಡಿ ಮಕ್ಕಳನ್ನು ವಿದ್ಯಾಸಂಸ್ಥೆಗೆ ದಾಖಲು ಮಾಡುತ್ತಿರುವುದು ಉತ್ತಮ ಬೆಳವಣಿಗೆಯಲ್ಲ. ಬದಲಾಗಿ ವಿದ್ಯಾಸಂಸ್ಥೆಯು ಯಾವ ಗುಣಮಟ್ಟದಲ್ಲಿದೆ, ಕಲಿಕೆಗೆ ಪೂರಕ ವಾತಾವರಣವಿದೆಯೋ ಎಂಬುದನ್ನು ಮೊದಲು ಗಮನಿಸಬೇಕಾದುದು ಹೆತ್ತವರ ಕರ್ತವ್ಯ. ಈ ವಿವೇಕಾನಂದ ಕಾಲೇಜು ಮಕ್ಕಳಿಗೆ ನೈಜ ಶಿಕ್ಷಣವನ್ನು ನೀಡಲೆಂದೇ ಸ್ಥಾಪಿತವಾಗಿರುವ ಸಂಸ್ಥೆ. ಮಕ್ಕಳಲ್ಲಿ ಉತ್ತಮ ಆಲೋಚನೆಗಳನ್ನು ಬಿತ್ತುವುದು, ಅವರಲ್ಲಿ ರಚನಾತ್ಮಕ ಕೌಶಲ್ಯಗಳನ್ನು ಬೆಳೆಸುವುದು ವಿವೇಕಾನಂದ ಶಿಕ್ಷಣ ಸಂಸ್ಥೆಗಳ ಮೂಲ ಧ್ಯೇಯವಾಗಿದೆ. ವಿದ್ಯಾರ್ಥಿಗಳು ಇಚ್ಛಾಶಕ್ತಿ, ಬದ್ಧತೆ, ಛಲ ಮತ್ತು ಅತ್ಮವಿಶ್ವಾಸವನ್ನು ಬೆಳೆಸಿಕೊಳ್ಳಬೇಕು. ಅಧ್ಯಯನ ಮತ್ತು ಸಹಕಾರ ಮನೋಭಾವವನ್ನು ರೂಢಿಸಿಕೊಳ್ಳಬೇಕು. ಸಾಧನೆಯ ಹಾದಿಯಲ್ಲಿ ಸಾಗಬೇಕು. ಸ್ವಂತಿಕೆ-ಸ್ವಾಭಿಮಾನಗಳನ್ನು ಮೆರೆಯಬೇಕು. ಆಸಕ್ತಿ ಮತ್ತು ಕಠಿಣ ಪರಿಶ್ರಮ ಯಶಸ್ಸಿನ ಮೂಲಮಂತ್ರ. ಧನಾತ್ಮಕ ಯೋಚನೆ ಮತ್ತು ನಿರೀಕ್ಷೆಗಳಿದ್ದಲ್ಲಿ ಸಾಧನೆಗಳು ಒಲಿಯುತ್ತವೆ. ಮಕ್ಕಳನ್ನು ಸಾಧನೆಯ ಹಾದಿಯಲ್ಲಿ ನಡೆಯುವಂತೆ ಹೆತ್ತವರು ಪ್ರೇರೇಪಿಸಬೇಕು. ಮಕ್ಕಳ ಕಷ್ಟ ಸುಖಗಳಲ್ಲಿ ಭಾಗಿಯಾಗಿ ಬದುಕಿನೆಡೆಗೆ ಒಲಿಸಲು ಯತ್ನಿಸಬೇಕು. ಜೀವನದ ಮೌಲ್ಯಗಳನ್ನು ತಿಳಿಸಿಕೊಡುವುದರೊಂದಿಗೆ ಸಮಯಪ್ರಜ್ಞೆ ಅಳವಡಿಸಿಕೊಳ್ಳುವಂತೆ ಮಾಡಬೇಕು ಎಂದರು.
ಪ್ರಾಂಶುಪಾಲ ಡಾ| ಸಿ.ಕೆ. ಮಂಜುನಾಥ್ ಕಲಿಕೆಯ ವಿಷಯ ಮತ್ತು ತರಬೇತಿಯ ಕುರಿತು ವಿವರಿಸುತ್ತಾ ಶಿಕ್ಷಕರೊಂದಿಗೆ ಪೋಷಕರು ತಮ್ಮ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ವಿಚಾರ ವಿನಿಮಯ ಮಾಡಬೇಕು. ಅವರ ಮಾನಸಿಕ ಬೆಳವಣಿಗೆಯ ಬಗ್ಗೆ ಶಿಕ್ಷಕರೊಂದಿಗೆ ಚರ್ಚಿಸಿದರೆ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಾಗುತ್ತದೆ. ವ್ಯಕ್ತಿತ್ವ ವಿಕಸನವು ಮನೆಯ ಪರಿಸರದಿಂದ ಆಗುವ ಕಾರಣ ಮಕ್ಕಳೊಂದಿಗೆ ಹೆತ್ತವರು ಹೆಚ್ಚು ಕಾಲವನ್ನು ಕಳೆಯಬೇಕು. ಸಕರಾತ್ಮಕ ಮಾತುಗಳನ್ನು ಆಡುವಂತೆ ಜಾಗೃತಿಯನ್ನು ಉಂಟು ಮಾಡಬೇಕು ಎಂದು ಅಭಿಪ್ರಾಯಪಟ್ಟರು. ತ್ರಿಶಾ ಸಂಸ್ಥೆಯ ಅಧ್ಯಕ್ಷ ಗೋಪಾಲೃಷ್ಣ ಭಟ್ ಸಿ.ಎ. ತರಬೇತಿಯ ಬಗ್ಗೆ ಮಾಹಿತಿಗಳನ್ನು ನೀಡಿದರು.
ಸಂಚಾಲಕ ಸಂತೋಷ್ ಬಿ, ಸದಸ್ಯ ರವಿ ಮುಂಗ್ಲಿಮನೆ ಉಪಸ್ಥಿತರಿದ್ದರು. ಉಪನ್ಯಾಸಕಿ ನಳಿನಕುಮಾರಿ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಉಪನ್ಯಾಸಕ ಶ್ರೀಧರ ಶೆಟ್ಟಿಗಾರ್ ಮತ್ತು ದಯಾಮಣಿ ಕಾಲೇಜಿನ ನೀತಿ ನಿಯಮಗಳ ಕುರಿತು ಮಾರ್ಗದರ್ಶನ ಮಾಡಿದರು. ಉಪನ್ಯಾಸಕಿ ರಮ್ಯಜ್ಯೋತಿ ನಿರೂಪಿಸಿ ಪುಷ್ಪಲತಾ ವಂದಿಸಿದರು.