ಇಡಗುಂಜಿ : ಕಳೆದ ಎಂಟು ದಶಕಕ್ಕೂ ಮಿಕ್ಕಿ ಯಕ್ಷಗಾನ ಸೇವೆಯಲ್ಲಿ ತೊಡಗಿಕೊಂಡು ಹಲವಾರು ಸಾಂಸ್ಕೃತಿಕ ದಾಖಲೆ ಸೃಷ್ಟಿಸಿದ ಸುಪ್ರಸಿದ್ಧ ಯಕ್ಷಗಾನ ಮೇಳವಾದ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿಗೆ ಮಧ್ಯಪ್ರದೇಶ ಸರ್ಕಾರದ ಸಂಸ್ಕೃತಿ ವಿಭಾಗದಿಂದ 2015-16ನೇ ಸಾಲಿನ ಅತ್ಯಂತ ಪ್ರತಿಷ್ಠಿತ ‘ರಾಜಾ ಮಾನಸಿಂಹ ತೋಮರ್’ ಸಮ್ಮಾನ ಘೋಷಣೆಯಾಗಿದೆ.
ದೇಶ ವಿದೇಶಗಳಲ್ಲಿ ಹಲವಾರು ಪ್ರತಿಷ್ಠಿತ ಪ್ರದರ್ಶನ ನೀಡಿ ಯಕ್ಷಗಾನ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆಗೈದ ಶ್ರೀ ಇಡಗುಂಜಿ ಮೇಳಕ್ಕೆ ಈ ಪ್ರತಿಷ್ಠಿತ ಪ್ರಶಸ್ತಿ ಪ್ರಪ್ರಥಮ ಬಾರಿಗೆ ಒಲಿದು ಬಂದಿದೆ .
1934ರಲ್ಲಿ ರಾಷ್ಟ್ರಪ್ರಶಸ್ತಿ ಪುರಸ್ಕೃತ ಕೆರೆಮನೆ ಶಿವರಾಮ ಹೆಗಡೆ ಅವರಿಂದ ಸ್ಥಾಪಿತವಾದ ಇಡಗುಂಜಿ ಮೇಳ ಸಂಪ್ರದಾಯ ಮತ್ತು ಸೃಜನಶೀಲತೆ, ನವನಾವಿನ್ಯ ಆವಿಷ್ಕಾರಗಳ ಮೂಲಕ ದೇಶದ ಕಲಾ ಭೂಪಟದಲ್ಲಿ ವಿಶೇಷ ಮನ್ನಣೆ ಸಂಪಾದಿಸಿದೆ . 1973ರಲ್ಲಿ ಕೆರೆಮನೆ ಶಂಭು ಹೆಗಡೆ ಅವರಿಂದ ಪುನಃ ಸಂಘಟನೆಗೊಂಡು ಯಕ್ಷಗಾನ ರಂಗಭೂಮಿಗೆ ಹಲವಾರು ಕಲಾತ್ಮಕ ಮತ್ತು ವ್ಯಾವಹಾರಿಕ ಕೊಡುಗೆ ನೀಡಿದೆ .
ಮಂಡಳಿಯು ದೇಶದ ನಾನಾ ಪ್ರತಿಷ್ಠಿತ ಸಂಸ್ಥೆಗಳ ಉತ್ಸವಗಳಲ್ಲಿ ಯಶಸ್ವಿ ಪ್ರದರ್ಶನ ನೀಡಿದ್ದಲ್ಲದೆ ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್, ಸಿಂಗಪುರ,ಫಿಲಿಫೈನ್ಸ್, ಮಲೇಷಿಯಾ, ಲಾವೋಸ್, ಬರ್ಮಾ , ಇಂಡೋನೇಷ್ಯಾ ನೇಪಾಳ, ಬಾಂಗ್ಲಾದೇಶ ಮೊದಲಾದ ವಿದೇಶಿ ನೆಲದಲ್ಲಿ ಕೂಡ ಯಕ್ಷಗಾನ ಪ್ರದರ್ಶನ ನೀಡಿದೆ .
ಈ ಎಲ್ಲ ಸಾಧನೆಗಳನ್ನು ಗಮನಿಸಿ ಶ್ರೀ ಇಡಗುಂಜಿ ಮೇಳಕ್ಕೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದ್ದು ಈ ಪ್ರಶಸ್ತಿ ಒಂದು ಲಕ್ಷ ನಗದು ಪ್ರಶಸ್ತಿ ಪತ್ರ ಇತ್ಯಾದಿ ಮನ್ನಣೆಗಳನ್ನು ಹೊಂದಿದೆ .
ಡಿಸೆಂಬರ್ 22 ರಂದು ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ಈ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ .