ನೂತನ ಸಂಸದ ತೇಜಸ್ವಿ ಸೂರ್ಯರನ್ನು ತಮಿಳು ನಟ ಸೂರ್ಯ ಮೆಚ್ಚಿಕೊಂಡಿದ್ದಾರೆ. ಚಿಕ್ಕವಯಸ್ಸಿನಲ್ಲಿಯೇ ರಾಜಕೀಯಕ್ಕೆ ಬಂದ ತೇಜಸ್ವಿ ಬಗ್ಗೆ ಸೂರ್ಯ ಮೆಚ್ಚುಗೆ ಮಾತುಗಳನ್ನು ಆಡಿದ್ದಾರೆ.
ನಟ ಸೂರ್ಯ ಅಭಿನಯದ ‘ಎನ್.ಜಿ.ಕೆ’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಈ ಸಿನಿಮಾದ ಕಥೆ ರಾಜಕೀಯದ ಬಗ್ಗೆ ಇದೆ. ಸಾಮಾನ್ಯ ಜನಜೀವನ, ರಾಜಕೀಯ ಮತ್ತು ಸಮಾಜದ ಕೆಲ ವಿಷಯಗಳ ಮೇಲೆ ಸಿನಿಮಾವನ್ನು ಮಾಡಲಾಗಿದೆ.
ಈ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮ ನಿನ್ನೆ ಹೈದರಾಬಾದ್ ನಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಮಾತನಾಡಿದ ಸೂರ್ಯ, ಯುವಕರು ರಾಜಕೀಯದ ಬಗ್ಗೆ ಜ್ಷಾನ ಹೊಂದಿರಬೇಕು. ರಾಜಕೀಯ ಪಕ್ಷದ ಪ್ರಣಾಳಿಕೆ ಬಗ್ಗೆ ತಿಳಿದುಕೊಂಡಿರಬೇಕು. ರಾಜಕೀಯ ಪಕ್ಷಗಳು ಏನು ಮಾಡಿವೆ ಎನ್ನುವುದಕ್ಕಿಂತ, ಸಮಾಜಕ್ಕೆ ನಾವೇನು ಮಾಡಿದ್ದೇವೆ ಎಂದು ಯೋಚನೆ ಮಾಡಬೇಕು ಎಂದರು.
ಈ ವೇಳೆ ರಾಜಕೀಯಕ್ಕೆ ಬರುತ್ತಿರುವ ಯುವಕರ ಬಗ್ಗೆ ಮೆಚ್ಚುಗೆ ಸೂಚಿಸಿದ ಅವರು ಆಂಧ್ರದ ಜಗನ್, ಬೆಂಗಳೂರಿನ ತೇಜಸ್ವಿ ಸೂರ್ಯ ಹೆಸರು ತಗೆದುಕೊಂಡರು. 28 ವರ್ಷಕ್ಕೆ ಎಂ.ಪಿ.ಯಾದ ತೇಜಸ್ವಿ ಸೂರ್ಯರನ್ನು ಹೊಗಳಿದರು. ಸೂರ್ಯ ಹಾಗು ಸಾಯಿ ಪಲ್ಲವಿ ನಟನೆಯ ‘ಎನ್.ಜಿ.ಕೆ’ ಸಿನಿಮಾ ಇದೇ ಶುಕ್ರವಾರ ಬಿಡುಗಡೆಯಾಗಲಿದೆ.