ಆಂಧ್ರ ಪ್ರದೇಶದ ನೂತನ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಮತ್ತು ತೆಲಂಗಾಣ ಸಿಎಂ ಕೆ ಚಂದ್ರಶೇಖರ ರಾವ್ ಅವರಿಗೆ ತಾಂತ್ರಿಕ ಕಾರಣಗಳಿಂದಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಭಾಗವಹಿಸಲು ಅಸಾಧ್ಯವಾಗಿದೆ.
ರಾಷ್ಟ್ರ ರಾಜಧಾನಿ ದಿಲ್ಲಿ ಸುತ್ತಮುತ್ತಲಿನ ವಾಯು ಪ್ರದೇಶವನ್ನು ಇಂದು ಗುರುವಾರ ಸಂಜೆ 4 ಗಂಟೆಯಿಂದಲೇ ಹಾರಾಟ ನಿಷಿದ್ಧ ಪ್ರದೇಶವನ್ನಾಗಿ ಘೋಷಿಸಲಾಗಿದೆ. ಜಗನ್ ಮತ್ತು ಕೆಸಿಆರ್ ಅವರಿಂದು ಮಧ್ಯಾಹ್ನ 3 ಗಂಟೆಯ ಸುಮಾರಿಗೆ ವಿಜಯವಾಡದಿಂದ ದಿಲ್ಲಿಗೆ ಹೊರಡುವವರಿದ್ದರು. ಆದರೆ ದಿಲ್ಲಿ ನೋ ಫ್ಲೈ ಝೋನ್ ಆಗಿರುವುದರಿಂದ ಕೆಸಿಆರ್ ಇದೀಗ ಹೈದರಾಬಾದ್‍ಗೆ ಮರಳುತ್ತಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಸುಮಾರು 8,000 ಅತಿಥಿಗಳು ಭಾಗವಹಿಸುತ್ತಿದ್ದು ಇವರಲ್ಲಿ ವಿದೇಶೀ ಗಣ್ಯರು, ಮುಖ್ಯಮಂತ್ರಿಗಳು ಮತ್ತು ರಾಜ್ಯಪಾಲರು ಗಣನೀಯ ಸಂಖ್ಯೆಯಲ್ಲಿದ್ದಾರೆ.