ಗಡಿನಾಡಿನ ಕಾಟುಕುಕ್ಕೆಯ ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿಬೆಳೆದ ಕಲಾ ಬೆಡಗಿ ಅನುಪಮಾಳು
ಖ್ಯಾತ ಕಾಷ್ಠ ಶಿಲ್ಪಿ ಮತ್ತು ಕಾರ್ಟೂನಿಸ್ಟ್ ಜಿ.ಕೆ.ಭಟ್ ಹಾಗು ಜಯಲಕ್ಷ್ಮಿ ಅವರ ಸುಪುತ್ರಿಯಾಗಿರುವ ಈಕೆ ಈಗ ಬೆಂಗಳೂರು ನಿವಾಸಿ. ವಂಶವಾಹಿನಿಯಾಗಿ ಬಂದ ಕಲೆಯ ಪರಿಮಳದ ಜೊತೆಗೆ ತನ್ನ ಸಾಧನೆಯ ಮೆರುಗನ್ನು ಬೆರೆಸಿ “ಕುಂಚದ ಬೆಡಗಿ” ಎಂದು ಗುರುತಿಸಲ್ಪಟ್ಟ ಕಲಾ ಮಾತೆಯ ಮಗಳು. ಬೆಂಗಳೂರಿನ ಬಿ.ಟಿ.ಎಮ್ ಲೇ ಔಟ್ನ ಸಮೀಪದ ಅನುಗ್ರಹ ಲೇಔಟ್ನ ಮನೆಯೊಂದರಲ್ಲಿ ವಾಸಿಸುತ್ತಿರುವ ಇವರ ಮನೆಯೇ ಒಂದು ಕಲಾಮಂದಿರ. ಗೋಡೆಯ ತುಂಬಾ ಸೆರಾಮಿಕ್ ಮ್ಯೂರಲ್ ಪೈಂಟಿಂಗ್ನಿಂದ ಆಧ್ಯಾತ್ಮಿಕ ಸಂವೇದನೆಯನ್ನು ಉಂಟುಮಾಡುತ್ತಾ ಆಧುನಿಕತೆಯ ಸ್ಪರ್ಶದೊಂದಿಗೆ ಇವು ನೋಡುಗರ ಮೈನವಿರೇಳಿಸುತ್ತದೆ. ಇದಲ್ಲದೆ ಪಾಟ್ ಪೈಂಟಿಂಗ್ ಮತ್ತು ತೈಲವರ್ಣ ರಚನೆಯಲ್ಲೂ ಇವರು ಪರಿಣಿತೆ. ಚಿಕ್ಕ ವಯಸ್ಸಿನಲ್ಲಿ ಪೂರಕ ವಾತಾವರಣದೊಂದಿಗೆ ಬೆಳೆದ ಈಕೆ ಗಿಲಿಗಿಲಿ ಮ್ಯಾಜಿಕ್ ಖ್ಯಾತಿಯ ಶಂಕರ್ ಅವರ ತಂಡದಲ್ಲಿ ಸುಮಾರು ಏಳು ವರ್ಷಗಳ ಕಾಲ ಹಲವಾರು ವೇದಿಕೆಗಳಲ್ಲಿ ಕಾಣಿಸಿಕೊಂಡಿದ್ದರು. 2001ರ ಮಾರ್ಚ್ ತುಷಾರ ಸಂಚಿಕೆಯು ಹೆಸರಿಗೆ ತಕ್ಕಂತಿರುವ ಈ ಅನುಪಮ ಸುಂದರಿಯ ಮುಖಪುಟದೊಂದಿಗೆ ಪ್ರಕಟನೆಗೊಂಡಿತ್ತು.
ಶಿಕ್ಷಣ ಪಡೆಯುತ್ತಿರುವ ಸಂಧರ್ಭದಲ್ಲಿಯೇ ಚಿತ್ರ ರಚನೆಯಲ್ಲಿ ಹಲವಾರು ಬಹುಮಾನಗಳನ್ನು ಗಿಟ್ಟಿಸಿಕೊಂಡ ಈಕೆ ಎಂ.ಕಾಂನಲ್ಲಿ ಹತ್ತನೇಯ ರಾಂಕ್ ವಿಜೇತೆ ಕೂಡ ಹೌದು.ಶ್ರೀಯುತ ಗಣೇಶ್ ಪ್ರಸಾದ್ ಅವರ ಮಡದಿಯಾದ ನಂತರ ಮನದೊಡೆಯನ ಒತ್ತಾಸೆ ಅವರ ಪ್ರವೃತ್ತಿಗೆ ಗರಿಹುಟ್ಟಿಸಿ ಬಾನೆತ್ತರಕ್ಕೆ ಹಾರುವಂತೆ ಮಾಡಿತು. ಮದುವೆಯಾಗಿ ಬೆಂಗಳೂರಿಗೆ ಬಂದ ಮೇಲೂ ಸಹ ತನ್ನ ಕಲಿಕೆಯನ್ನು ಗುರುವಾದ ಶ್ರೀಮತಿ ಶೈಲಾ ಪ್ರಸಾದ್ ಮತ್ತು ಶ್ರೀ ಮುನಿಯಪ್ಪ ಪಿಲ್ಲಪ್ಪ ಅವರಲ್ಲಿ ಮುಂದುವರಿಸಿದರು.ತನ್ನ ಕಲಾಕೃತಿಗಳಿಗೆ “ಅನುರೂಪಿಕಾ” ಎಂಬ ವಿಶಿಷ್ಟ ನಾಮಧೇಯವನ್ನು ಇರಿಸಿಕೊಂಡು ಅಲ್ಲೂ ಕೂಡ ಈಕೆ ಯಾರ ಅನುಕರಣೆ ಇಲ್ಲದೇ ತಮ್ಮತನವನ್ನು ಉಳಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ. ಸೆರಾಮಿಕ್ ಹುಡಿಯನ್ನು ಫೆವಿಕಾಲ್ನೊಂದಿಗೆ ಬೆರೆಸಿ ಪ್ಲೈವುಡ್ ಹಲಗೆಯ ಮೇಲೆ ಆಧ್ಯಾತ್ಮಿಕ ಅರ್ಥ ಬರುವಂತಹ ದೃಶ್ಯಗಳನ್ನು ಕಲಾ ಆರಾಧಕರ ಮನ ಮುಟ್ಟುವಂತೆ ಚಿತ್ರಿಸುವುದು ಈಕೆಯ ವೈಶಿಷ್ಟ್ಯ. ಇಂತಹಾ ನೂರಾರು ಕೃತಿಗಳು ಈಗಾಗಲೇ ಕಲಾಜಗತ್ತಿಗೆ ಸಮರ್ಪಣೆಗೊಂಡಿವೆ. ಇದು ಒಂದು ಕ್ಷಣವೋ ಒಂದು ದಿನವೋ ಮಾಡಿ ಮುಗಿಸುವ ಕೆಲಸವಲ್ಲ,ಒಂದು ಸೆರಾಮಿಕ್ ಕೃತಿಯ ಸೃಷ್ಟಿಗೆ ಕನಿಷ್ಟ ಇಪ್ಪತ್ತೈದು ದಿನಗಳಾದರೂ ಬೇಕು.
ಇದಲ್ಲದೆ ಅನುಪಮ ಅವರು ನಾವು ಸಾಮಾನ್ಯವಾಗಿ ಯಾವುದೆಲ್ಲಾ ನಿರುಪಯೋಗಿ ವಸ್ತುಗಳೆಂದು ಪರಿಗಣಿಸಿ ಮೂಲೆಗೆಸೆಯುತ್ತೇವೊ ಅದರಿಂದ ಸುಂದರ ಕಲಾಕೃತಿಗಳನ್ನು ತಯಾರಿಸಬಲ್ಲ ಚಾತುರ್ಯವನ್ನು ಮೈಗೂಡಿಸಿಕೊಂಡಿದ್ದಾರೆ. ಪಿವಿಸಿ ಪೈಪ್ ತುಂಡು, ಶಂಖ, ಕಪ್ಪೆ ಚಿಪ್ಪು, ಪಿಸ್ತದ ಸಿಪ್ಪೆ, ಮರ ಮತ್ತು ಬಿದಿರಿನ ತುಂಡು ಹೀಗೆ ನಾವು ಕಸವೆಂದು ಪರಿಗಣಿಸಿದ್ದೆಲ್ಲಾ ಈ ಕಲಾವಿದೆ ಕೈಯಲ್ಲಿ ನೋಡುಗನ ಕಣ್ಣಿಗೆ ರಸದೌತಣ ನೀಡುವ ಕಲಾ ಕೌತುಕವಾಗುತ್ತದೆ. ನಿಜ ಅರ್ಥದಲ್ಲಿ ಓರ್ವ ಪ್ರಕೃತಿ ಮಾತೆಯ ಮಡಿಲಿನ ಮಗುವಾಗಿ ಗೋಚರಿಸುವುದು ಶ್ಲಾಘನೀಯ ವಿಚಾರ. ಈಕೆ ಆಕ್ರಲಿಕ್ ಹಾಗೂ ಫ್ಯಾಬ್ರಿಕ್ ಪೈಂಟಿಂಗ್ನಲ್ಲಿ ಕೂಡ ನಿಪುಣೆ. ಇದಕ್ಕೂ ವಿಪರೀತ ಬೇಡಿಕೆಯಿದೆ. ಇವರ ಕಲಾಕೃತಿಯ ಪ್ರದರ್ಶನ ಈಗಾಗಲೇ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಕಡೆಗಳಲ್ಲಿ ನಡೆದಿದೆ.
ಪ್ರಶಸ್ತಿಗಳು :
ಪ್ರತಿಷ್ಠಿತ “ಪರಮೇಶ್ವರ ಪುಲಕೇಶಿ ಪ್ರಶಸ್ತಿ 2018” ಅಖಿಲ ಕರ್ನಾಟಕ ಕನ್ನಡ ಚಳುವಳಿ ಕೇಂದ್ರ ಬೆಂಗಳೂರು.
“ಪೀಪಲ್ಸ್ ಆರ್ಟ ಫೌಂಡೇಶನ್” ನಡೆಸಿರುವ ರಾಷ್ಟ್ರ ಮಟ್ಟದ ಮಹಿಳಾ ಕಲಾ ಸ್ಪರ್ಧೆಯಲ್ಲಿ ಇವರ ಕಲಾಕೃತಿಗಳು ಶ್ರೇಷ್ಠ ದರ್ಜೆಯ ಗೌರವಕ್ಕೆ ಪಾತ್ರವಾಗಿದೆ.
“ಕಲಾಸಿರಿ ಪ್ರಶಸ್ತಿ” ಸಾಹಿತ್ಯ ಸಂಭ್ರಮ 2018-19 ಪುತ್ತೂರು ಸಾಹಿತ್ಯ ವೇದಿಕೆ ಯಕ್ಷ ಮಿತ್ರ ಸಾಂಸ್ಕೃತಿಕ ಸಂಘ.
“ಸ್ವರ್ಣಶ್ರೀ ಪ್ರಶಸ್ತಿ” 2018-19 ಲವ್ ಇಂಡಿಯಾ ರೀಜನಲ್ ಸಂಸ್ಥೆಯಿಂದ ನೀಡಲಾಗಿದೆ.
“ಗೌರವ ಪುರಸ್ಕಾರ” 2018-19 ವಿಶ್ವ ಧರ್ಮ ಮಂದಿರ ಸಂಸ್ಥೆ ನೀಡಿದೆ.
“ಸಾಧಕಿಯರಿಗೆ ಸನ್ಮಾನ ಪ್ರಶಸ್ತಿ” 2018-19 ನವ ಬೆಂಗಳೂರು ಕ್ಲಬ್ ನೀಡಿದೆ.
“ಸಾಧಕ ಪ್ರಶಸ್ತಿ” 2018-19 Exide Group ನೀಡಿದೆ.
ಕೇರಳದ ಗಡಿಪ್ರದೇಶದ ಕನ್ನಡ ಜನರ ಕಾಸರಗೋಡಿನ ಕಾಟುಕುಕ್ಕೆ ಎಂಬ ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿದ ಹೆಣ್ಣುಮಗಳೊಬ್ಬಳ ಈ ವಿಶಿಷ್ಠವಾದ ಸಾಧನೆ ಈ ಊರಿಗೆ ಒಂದು ಹೆಮ್ಮೆ ಮತ್ತು ತನ್ನೂರಿನ ಮುಂದಿನ ಪೀಳಿಗೆಗೆ ಒಂದು ಮಾದರಿ ಎಂದು ಗುರುತಿಸಿ ಕಾರ್ತಿಕೇಯ ಚಾರಿಟೆಬಲ್ ಟ್ರಸ್ಟ್ನ “ನಮ್ಮೂರ ಸಾಧಕಿ” ಗೌರವ ಸನ್ಮಾನ ನೀಡಿದೆ.
ನವ ಬೆಂಗಳೂರು ಕ್ಲಬ್ ವತಿಯಿಂದ “ಸಾಧಕಿಯರಿಗೆ ಸನ್ಮಾನ 2019 ” ಪ್ರಶಸ್ತಿಯನ್ನು ಕೊಟ್ಟು ವಿಶೇಷ ಗೌರವ ನೀಡಿದ್ದಾರೆ.
ಇದೀಗ ಈಕೆ ಮಕ್ಕಳಿಗಾಗಿಯೂ,ಹಿರಿಯರಿಗಾಗಿಯೂ ಚಿತ್ರಕಲಾಶಿಬಿರವನ್ನೂ ಕೂಡ ಬೆಂಗಳೂರಿನಲ್ಲಿ ಏರ್ಪಡಿಸುತ್ತಾ ತನ್ನ ಕಲೆಯ ಮೇಲಿನ ಅಭಿಮಾನವನ್ನು ಅಭಿವ್ಯಕ್ತಿಗೊಳಿಸುತ್ತಿದ್ದಾರೆ. ಪತಿ ಗಣೇಶ ಪ್ರಸಾದ್ ಮತ್ತು ಪುತ್ರಿ ಆಕಾಂಕ್ಷಾಳ ಜೊತೆ ಸಂತೃಪ್ತ ಜೀವನ ನಡೆಸುತ್ತಾ ತಮ್ಮ ವಿಶಿಷ್ಟ ಸಾಧನೆಯನ್ನು ಮುಂದುವರಿಸಿದ್ದಾರೆ.