Sunday, January 19, 2025
ರಾಜಕೀಯಸುದ್ದಿ

ಮಂಡ್ಯ ಅಭಿವೃದ್ಧಿಗೆ ಸುಮಕ್ಕನ ಜೊತೆ ಕೈ ಜೋಡಿಸುವೆ- ಕಹಳೆ ನ್ಯೂಸ್

ಲೋಕಸಭೆ ಚುನಾವಣೆಯಲ್ಲಿ ತನ್ನ ಸೋಲಿಗೆ ತಾನೇ ಕಾರಣ ಎಂದು ಹೇಳಿಕೊಂಡಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ, ತಮ್ಮ ಪ್ರತಿಸ್ಪರ್ಧಿ ಸುಮಲತಾ ಅಂಬರೀಷ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಈ ಮೂಲಕ ನಿಖಿಲ್ ಪ್ರಬುದ್ಧತೆ ಮೆರೆದಿದ್ದು, ಈ ಪ್ರಬುದ್ಧತೆಯನ್ನು ಜೆಡಿಎಸ್ ನ ಇತರೆ ಹಿರಿಯ ನಾಯಕರು ಕಲಿಯಬೇಕಾದ ಅಗತ್ಯವಿದೆ.

ಹೌದು, ನಿಖಿಲ್ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಅಭಿಷೇಕ್ ಜತೆಗಿನ ಫೋಟೋ ಹಾಕಿ, ಚುನಾವಣೆ ಸೋಲಿನ ಹೊಣೆಯನ್ನು ತಾನೆ ಹೊತ್ತುಕೊಂಡಿರುವುದಲ್ಲದೇ, ಅಭಿಷೇಕ್ ಅವರ ಚೊಚ್ಚಲ ಚಿತ್ರ ಅಮರ್ ಯಶಸ್ಸಿಗೆ ಶುಭಕೋರಿದ್ದಾರೆ. ಜತೆಗೆ ಸುಮಲತಾ ಅವರ ಗೆಲುವಿಗೆ ಅಭಿನಂದನೆ ಸಲ್ಲಿಸಿದ್ದು, ಮಂಡ್ಯ ಜಿಲ್ಲೆ ಅಭಿವೃದ್ಧಿಗೆ ಒಟ್ಟಾಗೆ ಕೆಲಸ ಮಾಡೋಣ ಎಂಬ ಸಂದೇಶವನ್ನು ರವಾನಿಸಿದ್ದಾರೆ. ಇದು ಸಹಜವಾಗಿಯೇ ಸಾಕಷ್ಟು ಗಮನ ಸೆಳೆದಿದೆ. ನಿಖಿಲ್ ಅವರು ತಮ್ಮ ಖಾತೆಯಲ್ಲಿ ನೀಡಿರುವ ಸಂದೇಶದ ಸಾರಾಂಶ ಹೀಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

‘ಅಮರ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸುತ್ತಿರುವ ನನ್ನ ಗೆಳೆಯ ಅಭಿಷೇಕ್ ಗೆ ಶುಭಕೋರುತ್ತೇನೆ. ಈ ಚಿತ್ರ ಅತ್ಯುತ್ತಮವಾಗಿ ಮೂಡಿಬಂದಿದೆ ಎಂಬ ವಿಶ್ವಾಸ ನನಗಿದೆ. ಎಲ್ಲರು ಚಿತ್ರಮಂದಿರಕ್ಕೆ ಹೋಗಿ ಅಭಿಗೆ ಆಶೀರ್ವಾದ ಮಾಡಬೇಕು. ಇದು ಕೇವಲ ತೋರಿಕೆಗಾಗಿ ಹೇಳುತ್ತಿರುವ ಮಾತಲ್ಲ. ನನಗೆ ಸಂಬಂಧಗಳು ಮುಖ್ಯವೇ ಹೊರತು ಉಳಿದವು ನಂತರ. ಇದನ್ನೇ ನಾನು ಚುನಾವಣೆ ಪ್ರಚಾರದಲ್ಲಿ ಹೇಳಿಕೊಂಡು ಬಂದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಚುನಾವಣೆಯಲ್ಲಿ ಜಯಗಳಿಸಿದ ಸುಮಕ್ಕಗೆ ಅಭಿನಂದನೆ ಸಲ್ಲಿಸಲು ಇಚ್ಛಿಸುತ್ತೇನೆ. ಮಂಡ್ಯದ ಅಭಿವೃದ್ಧಿಗಾಗಿ ಅವರ ಜತೆ ಕೈಜೋಡಿಸಿ ದುಡಿಯಲು ಬಯಸುತ್ತೇನೆ. ಈ ಚುನಾವಣೆಯಲ್ಲಿ ನನ್ನ ಸೋಲಿಗೆ ನಿಖಿಲ್ ಕುಮಾರಸ್ವಾಮಿಯೇ ಹೊರತು ಬೇರಾರು ಅಲ್ಲ. ಈ ಸೋಲಿಗೆ ನಮ್ಮ ಶಾಸಕರಾಗಲಿ, ಎಂಎಲ್ಸಿಗಳಾಗಲಿ, ಕಾರ್ಯಕರ್ತರಾಗಲಿ, ಮುಖ್ಯಮಂತ್ರಿಗಳಾಗಲಿ ಅಥವಾ ಜೆಡಿಎಸ್ ಅಧ್ಯಕ್ಷ ದೇವೇಗೌಡರಾಗಲಿ ಅಲ್ಲ. ಮಂಡ್ಯದ ಜನ ನಿಖಿಲ್ ಕುಮಾರಸ್ವಾಮಿ ಅವರನ್ನು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ. ಈ ಸೋಲಿನಿಂದಾಗಿ ಕಾರ್ಯಕರ್ತರಲ್ಲಿ ಆಗಿರುವ ನಿರಾಸೆಗೆ ನಾನು ಅವರಿಗೆ ಕ್ಷಮೆ ಕೋರುತ್ತೇನೆ.

ಕುಮಾರಸ್ವಾಮಿ ಅವರ ನೇತೃತ್ವದ ಮೈತ್ರಿ ಸರ್ಕಾರ ಈ ವರ್ಷದ ಬಜೆಟ್ ನಲ್ಲಿ ಮಂಡ್ಯ ಜಿಲ್ಲೆಗೆ 8671 ಕೋಟಿ ಅನುದಾನ ನೀಡಿದ್ದು, ಇದು ಅತ್ಯುತ್ತಮ ರೀತಿಯಲ್ಲಿ ಬಳಕೆಯಾಗುವಂತೆ ನೋಡಿಕೊಳ್ಳುತ್ತೇನೆ. ಮಂಡ್ಯದ ಅಭಿವೃದ್ಧಿ ನಮ್ಮ ಜವಾಬ್ದಾರಿ. ಚುನಾವಣೆಯಲ್ಲಿ ನನಗೆ ಮತ ಹಾಕಿದ 5 ಲಕ್ಷದ 76 ಸಾವಿರದ 400 ಚಿಲ್ಲರೆ ಮತಗಳನ್ನು ಹಾಕಿದ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸುತ್ತೇನೆ. ಮುಂದಿನ ದಿನಗಳಲ್ಲಿ ಮಂಡ್ಯ ಜಿಲ್ಲೆ ಜನರ ಪ್ರೀತಿ ಹಾಗೂ ಗೌರವವನ್ನು
ಸಂಪಾದಿಸಲು ಇಚ್ಛಿಸುತ್ತೇನೆ. ಈ ಚುನಾವಣೆಯಲ್ಲಿ ತಾಂತ್ರಿಕವಾಗಿ ನಾನು ಸೋತಿರಬಹುದು. ಆದರೆ ಮೊದಲನೆ ದಿನದಿಂದ ಇಲ್ಲಿಯವರೆಗೂ ಸಾಕಷ್ಟು ಅಂಶಗಳನ್ನು ಗಳಿಸಿಕೊಂಡಿದ್ದೇನೆ. ನಿಖಿಲ್ ಕುಮಾರಸ್ವಾಮಿ ಅವರನ್ನು ರಾಜಕಾರಣಿಯಾಗಿ ಗಂಭೀರವಾಗಿ ಪರಿಗಣಿಸಬೇಕೆ ಅಥವಾ ಬೇಡವೇ ಎಂಬ ಪ್ರಶ್ನೆ ನಿಮ್ಮನ್ನು ಕಾಡುತ್ತಿದ್ದರೆ, ಮುಂದಿನ ದಿನಗಳಲ್ಲಿ ನಾನು ಮಂಡ್ಯ ಸೇರಿದಂತೆ ರಾಜ್ಯದ ಇತರೆ ಎಲ್ಲ ಜಿಲ್ಲೆಗಳ ಪ್ರವಾಸ ಮಾಡುತ್ತೇನೆ. ಪಕ್ಷದ ಕಾರ್ಯಕರ್ತರನ್ನು ಹುರಿದುಂಬಿಸುತ್ತೇನೆ. ಮುಂದಿನ ಒಂದೆರಡು ದಿನಗಳಲ್ಲಿ ಪತ್ರಿಕಾಗೋಷ್ಠಿ ಕರೆದು ವಿವರವಾಗಿ ಮಾತನಾಡುತ್ತೇನೆ. ನಿಮ್ಮ ಪ್ರೀತಿ ಹಾಗೂ ಹಾರೈಕೆಗೆ ಧನ್ಯವಾದಗಳು. ದೇವರು ಎಲ್ಲರಿಗೂ ಒಳ್ಳೆಯದನ್ನು ಮಾಡಲಿ.’

ನಿಖಿಲ್ ಅವರ ಈ ಮಾತುಗಳು ಜೆಡಿಎಸ್ ನಾಯಕರುಗಳು ಕಲಿಯಲೇಬೇಕಾದ ಪಾಠವಾಗಿದೆ. ಕಾರಣ, ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಸುಮಲತಾ ಅವರ ವಿರುದ್ಧ ಜೆಡಿಎಸ್ ನ ಹಲವು ನಾಯಕರು ದ್ವೇಷದ ಮಾತುಗಳು, ನಿಂದನೆಗಳನ್ನು ಆಡಿದ್ದು, ಅದೇ ಪಕ್ಷದ ಹಿನ್ನಡೆಗೆ ಪ್ರಮುಖ ಕಾರಣವಾಗಿತ್ತು. ಚುನಾವಣೆ ಸೋತ ಬಳಿಕವೂ ಕಾವೇರಿ ವಿಚಾರವಾಗಿ ಸಚಿವ ಸಾರಾ ಮಹೇಶ್, ಹೊಸ ಸಂಸದರು ನೋಡಿಕೊಳ್ಳುತ್ತಾರೆ ಎಂಬ ರಾಜಕೀಯ ಉದ್ದೇಶಿತ ಮಾತುಗಳು ಟೀಕೆಗೆ ಕಾರಣವಾಗಿದ್ದವು. ಹೀಗಾಗಿ ಮುಂದಿನ ದಿನಗಳಲ್ಲಿ ಜೆಡಿಎಸ್ ಮಂಡ್ಯದಲ್ಲಿ ತನ್ನ ಬಿಗಿ ಹಿಡಿತವನ್ನು ಉಲಿಸಿಕೊಳ್ಳಬೇಕಾದರೆ, ತಮ್ಮ ಅಹಂ ಅನ್ನು ಪಕ್ಕಕ್ಕಿಟ್ಟು, ಪ್ರಬುದ್ಧತೆಯಿಂದ ತಮ್ಮ ಮಾತಿನ ಮೇಲೆ ಹಿಡಿತ ಸಾಧಿಸುವ ಅಗತ್ಯವಿದೆ. ಸದ್ಯ ನಿಖಿಲ್ ಕುಮಾರಸ್ವಾಮಿ ಅವರ ಸಂದೇಶ ಮಂಡ್ಯ ಜಿಲ್ಲೆಗೆ ಸಕಾರಾತ್ಮಕ ಸಂದೇಶ ರವಾನಿಸಿದ್ದು, ಇತರೆ ನಾಯಕರು ನಿಖಿಲ್ ಹಾದಿ ಹಿಡಿಯಬೇಕು.