ಉಡುಪಿ : ಪ್ರತಿನಿತ್ಯ ಏಸಿ ಕಾರಲ್ಲಿ ಓಡಾಡೋ ಅದೀಕಾರಿಗಳು ಒಂದು ದಿನದ ಮಟ್ಟಿಗೆ ಏಸಿ ಕಾರ್ ಗೆ ರೆಸ್ಟ್ ಕೊಟ್ಟು ಸಾರ್ವಜನಿಕ ಸಾರಿಗೆ ಬಳಕೆ ಮಾಡಿದ ಘಟನೆ ಉಡುಪಿಯಲ್ಲಿ ನಡೆದಿದೆ.
ಗುರುವಾರ ಬೆಳಗ್ಗೆ 9.30 ಜಿಲ್ಲಾಧಿಕಾರಿ ನಿವಾಸದಿಂದ, ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಅವರು, ತಮ್ಮ ಅಧಿಕೃತ ಸರಕಾರಿ ವಾಹನವನ್ನು ಮನೆಯಲ್ಲಿಯೇ ಬಿಟ್ಟು, ತಮ್ಮ ವಾಹನ ಚಾಲಕ ಮತ್ತು ಅಂಗರಕ್ಷಕನೊಂದಿಗೆ ಸಾರ್ವಜನಿಕ ವಾಹನ ಏರಿದರು, ಜಿಲ್ಲಾಧಿಕಾರಿ ನಿವಾಸ ಪಕ್ಕದಲ್ಲೇ ಇರುವ ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಸಹ ತಮ್ಮ ವಾಹನ ಬಿಟ್ಟು ಜಿಲ್ಲಾಧಿಕಾರಿಗೆ ಸಾಥ್ ನೀಡಿದರು, ಅಜ್ಜರಕಾಡುನ ವಸತಿಗೃಹದಲ್ಲಿರುವ ವಿವಿಧ ಅಧಿಕಾರಿಗಳು ಸಹ ತಮ್ಮ ಸರಕಾರಿ ವಾಹನ ಬಿಟ್ಟು ಸಾರ್ವಜನಿಕ ಸಾರಿಗೆ ಏರಿದರು, ವಸತಿಗೃಹದಲ್ಲಿರುವ ವಿವಿಧ ಇಲಾಖೆಯ ಸಿಬ್ಬಂದಿಗಳು ಸಹ ಇವರನ್ನು ಸೇರಿಕೊಂಡರು. ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಅವರ ನಿರ್ದೇಶನದಂತೆ ಎಲ್ಲರೂ ಒಂದೇ ವಾಹನದಲ್ಲಿ ಮಣಿಪಾಲದ ರಜತಾದ್ರಿಯಲ್ಲಿರುವ ಜಿಲ್ಲಾಧಿಕಾರಿ ಕಚೇರಿಗೆ ಬರುವ ಮೂಲಕ ಜಿಲ್ಲೆಯಲ್ಲಿ ಸಾರ್ವಜನಿಕ ಸಾರಿಗೆ ಬಳಕೆಗೆ ಎಲ್ಲರಿಗೂ ಮಾದರಿಯಾದರು.
ಜಿಲ್ಲಾಧಿಕಾರಿ ನಿವಾಸದಿಂದ ಹೊರಟ ವಾಹನ, ಬನ್ನಂಜೆಯ ತಾಲೂಕು ಕಚೇರಿ ಮಾರ್ಗವಾಗಿ, ಸಿಟಿ ಬಸ್ ನಿಲ್ದಾಣ, ಎಂಜಿಎಂ ಕಾಲೇಜು ಮಾರ್ಗದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರ್ತವ್ಯಕ್ಕೆ ತೆರಳಲು ಕಾಯುತ್ತಿದ್ದ ವಿವಿಧ ಅಧಿಕಾರಿ ಮತ್ತು ಸಿಬ್ಬಂದಿಗಳೊಂದಿಗೆ ಬೆಳಗ್ಗೆ 9.50 ಕ್ಕೆ ಸರಿಯಾಗಿ ಜಿಲ್ಲಾಧಿಕಾರಿ ಕಚೇರಿ ತಲುಪಿತು.
ವಾರದಲ್ಲಿ ಒಂದು ದಿನವಾದರೂ ಎಲ್ಲ ಅಧಿಕಾರಿ, ಸಿಬ್ಬಂದಿಗಳು ಸಾರ್ವಜನಿಕ ಸಾರಿಗೆ ಬಳಸುವುದರ ಮೂಲಕ, ವಾತಾವರಣದಲ್ಲಿ ಇಂಗಾಲದ ಅಂಶ ಕಡಿಮೆ ಮಾಡುವುದರ ಜೊತೆಗೆ ವಾಯು ಮಾಲಿನ್ಯ ನಿಯಂತ್ರಣ ಸಹ ಸಾಧ್ಯವಾಗಲಿದೆ, ಜೊತೆಗೆ ಸಾರ್ವಜನಿಕ ಸಾರಿಗೆಗೂ ಸಹ ಉತ್ತೇಜನ ದೊರೆಯಲಿದೆ ಎಂಬ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಅವರ ಈ ಚಿಂತನೆ ಒಂದು ದಿನಕ್ಕೆ ಮಾತ್ರ ಸೀಮಿತವಾಗದೇ, ಪ್ರತಿ ಗುರುವಾರ, ಈ ರೀತಿಯ ಸಾರ್ವಜನಿಕ ಸಮೂಹ ಸಾರಿಗೆ ಬಳಸಲು ನಿರ್ಧರಿಸಿದ್ದಾರೆ.
ಸಂಜೆ 5.30 ಕ್ಕೆ ಕಚೇರಿ ಸಮಯ ಮುಕ್ತಾಯದ ನಂತರವೂ ಸಹ ಸಾರ್ವಜನಿಕ ವಾಹನದಲ್ಲಿಯೇ ಜಿಲ್ಲಾಧಿಕಾರಿ ಮತ್ತು ಸಿಬ್ಬಂದಿಗಳು ತೆರಳಿದರು.
ವಾಹನದಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆಂಪೇಗೌಡ, ಜಿಲ್ಲಾ ಹಿಂದುಳಿದ ವರ್ಗಗಳ ಅಧಿಕಾರಿ ಹೆಚ್.ಆರ್. ಲಮಾಣಿ ಮತ್ತಿತರರು ಪ್ರಯಾಣಿಸಿದರು.