ನವದೆಹಲಿ: ದೆಹಲಿಯಲ್ಲಿ ನಿನ್ನೆ ಗರಿಷ್ಠ ತಾಪಮಾನ ಹೊಸದಾಖಲೆ ನಿರ್ಮಿಸಿದೆ. ನಿನ್ನೆ 46.8 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಕಳೆದ ಐದು ವರ್ಷಗಳಲ್ಲೇ ಗರಿಷ್ಠ ಉಷ್ಣಾಂಶ ಇದಾಗಿದೆ. 2013ರ ಮೇ ತಿಂಗಳಲ್ಲಿ 47.2 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಇದಾದ ಬಳಿಕ ಮೇ ತಿಂಗಳಲ್ಲಿ ಇದೇ ಮೊದಲ ಬಾರಿಗೆ ಇಷ್ಟು ಪ್ರಮಾಣದ ತಾಪಮಾನ ದಾಖಲಾಗಿದೆ. ದೆಹಲಿಯ ಪಾಲಮ್ ಪ್ರದೇಶದಲ್ಲಿ 46.8 ಡಿಗ್ರಿ ಉಷ್ಣಾಂಶ ದಾಖಲಾಗಿದೆ. 1998ರ ಮೇ ತಿಂಗಳಲ್ಲಿ 48.4 ಡಿಗ್ರಿ ತಾಪಮಾನ ದಾಖಲಾಗಿದ್ದು ಈವರೆಗಿನ ಗರಿಷ್ಠ ತಾಪಮಾನವಾಗಿದೆ. ಪಾಲಮ್ ವಿಮಾನ ನಿಲ್ದಾಣವಿರುವ ಪ್ರದೇಶವಾಗಿದ್ದು, ಇಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿಮಾನಗಳ ಸಂಚಾರವಿರುತ್ತದೆ.
ಹೀಗಾಗಿ ಇಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿಮಾನದ ಹೊಗೆ ವಾತಾವರಣ ಸೇರಿ ತಾಪಮಾನ ಹೆಚ್ಚಾಗುವಿಕೆಗೆ ಕಾರಣವಾಗುತ್ತದೆ ಎಂದು ಹವಾಮಾನ ಸಂಸ್ಥೆಯ ಮಹೇಶ್ ಪಾಲಾವಟ್ ಹೇಳಿದ್ದಾರೆ.