ಬೆಂಗಳೂರು – ಅನೇಕ ಬಾರಿ ವಿಚಾರಣೆಗೆ ಗೈರು ಹಾಜರಾದ ಹಿನ್ನೆಲೆಯಲ್ಲಿ ಮಾಜಿ ಸಚಿವ ಹಾಗೂ ಹೊನ್ನಾಳಿ ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರನ್ನು ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯ ಸಂಜೆವರೆಗೂ ಪೊಲೀಸ್ ವಶಕ್ಕೆ ನೀಡಿದೆ. ರೈತರ ಪರ ಹೋರಾಟ ನಡೆಸಿದ ಪ್ರಕರಣವೊಂದರಲ್ಲಿ ನ್ಯಾಯಾಲಯದಿಂದ ಸಮನ್ಸ್ ಜಾರಿಯಾದರೂ ರೇಣುಕಾಚಾರ್ಯ ಅವರು ವಿಚಾರಣೆಗೆ ಹಾಜರಾಗಿರಲಿಲ್ಲ.
ಹಾಗಾಗಿ ಇಂದು ವಿಚಾರಣೆಗೆ ಹಾಜರಾಗಬೇಕೆಂದು ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯದ ನ್ಯಾಯಾಧೀಶರಾದ ರಾಮಚಂದ್ರ ಉದ್ದಾರ್ ಅವರು ಸಂಜೆ 5 ಗಂಟೆವರೆಗೆ ಪೊಲೀಸರ ವಶದಲ್ಲಿರುವಂತೆ ಆದೇಶ ನೀಡಿದ್ದಾರೆ. ಇಂದು ಬೆಳಗ್ಗೆ ತಮ್ಮ ವಕೀಲರೊಂದಿಗೆ ನ್ಯಾಯಾಲಯಕ್ಕೆ ಆಗಮಿಸಿದ ರೇಣುಕಾಚಾರ್ಯ ಅವರನ್ನು ನ್ಯಾಯಾಧೀಶರು ಪೊಲೀಸರ ವಶಕ್ಕೆ ನೀಡಿ ಸಂಜೆ 5 ಗಂಟೆವರೆಗೂ ಇಲ್ಲಿಯೇ ಇರುವಂತೆ ಸೂಚಿಸಿದ್ದಾರೆ. ಕಳೆದ ವರ್ಷ ದಾವಣಗೆರೆ ಜಿಲ್ಲೆಯ ರೈತರಿಗೆ ನೀರೊದಗಿಸುವ ಭದ್ರಾ ಡ್ಯಾಮ್ನಿಂದ ನೀರು ಹರಿಸುವಂತೆ ಶಿವಮೊಗ್ಗ ಜಿಲ್ಲೆ ಮಲವಗೊಪ್ಪ ಕಾಡಾ ಕಚೇರಿ ಬಳಿ ಪ್ರತಿಭಟನೆ ನಡೆಸಲಾಗಿತ್ತು.
ಅಂದು ಶಾಸಕರಾದ ಎಸ್.ಎ.ರವೀಂದ್ರನಾಥ್, ಮಾಡಾಳ್ ವಿರೂಪಾಕ್ಷಪ್ಪ, ಎಂ.ಪಿ.ರೇಣುಕಾಚಾರ್ಯ, ಕರುಣಾಕರ ರೆಡ್ಡಿ, ಮಾಜಿ ಶಾಸಕ ಬಿ.ಪಿ.ಹರೀಶ್ ಸೇರಿದಂತೆ ಮತ್ತಿತರರು ಮಲವಗೊಪ್ಪ ಬಳಿ ಪ್ರತಿಭಟನೆ ನಡೆಸಿದ್ದರು. ರೈತರು ಬೆಳೆದಿರುವ ಭತ್ತ ಮತ್ತು ಅಡಕೆ ಒಣಗಿ ಹೋಗುತ್ತಿರುವುದರಿಂದ ಕೂಡಲೇ ಭದ್ರಾ ಡ್ಯಾಮ್ನಿಂದ ನೀರು ಹರಿಸಬೇಕೆಂದು ಮಲವಗೊಪ್ಪದ ಕಾಡಾ ಕಚೇರಿ ಬಳಿ ಪ್ರತಿಭಟಿಸಿದ್ದರು.
ಈ ವೇಳೆ ರೈತರ ಜತೆಗೂಡಿ ರಸ್ತೆ ತಡೆಯನ್ನು ನಡೆಸಿದ್ದರಿಂದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಡುವೆ ಜಟಾಪಟಿ ನಡೆದಿದ್ದು, ಈ ಹಿನ್ನೆಲೆಯಲ್ಲಿ ರೇಣುಕಾಚಾರ್ಯ ಸೇರಿದಂತೆ ಅನೇಕರ ವಿರುದ್ಧ ದೂರು ದಾಖಲಿಸಲಾಗಿತ್ತು. ಅನೇಕ ಬಾರಿ ವಿಚಾರಣೆಗೆ ಹಾಜರಾಗುವಂತೆ ನ್ಯಾಯಾಲಯದಿಂದ ಸಮನ್ಸ್ ಜಾರಿಯಾಗಿದ್ದರೂ ಗೈರು ಹಾಜರಾಗಿದ್ದರು. ಹಾಗಾಗಿ ಇಂದು ಪೊಲೀಸ್ ವಶಕ್ಕೆ ನೀಡಲಾಗಿದೆ.