ನವದೆಹಲಿ : ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟದಲ್ಲಿ ಅನಂತ್ ಕುಮಾರ್ ಅವರು ನಿರ್ವಹಿಸಿದ ಖಾತೆಗಳನ್ನು ಇಬ್ಬರು ರಾಜ್ಯದ ನಾಯಕರಿಗೆ ಹಂಚಲಾಗಿದೆ. ಡಿ.ವಿ.ಸದಾನಂದಗೌಡ ಹಾಗೂ ಪ್ರಹ್ಲಾದ್ ಜೋಶಿ ಅವರಿಗೆ ನೀಡಲಾಗಿದೆ.
ಪ್ರಹ್ಲಾದ್ ಜೋಶಿಗೆ ಸಂಸದೀಯ ವ್ಯವಹಾರ
ಸತತ 4ನೇ ಸಲ ಗೆದ್ದು ಇದೀಗ ಕೇಂದ್ರದಲ್ಲಿ ಸಂಪುಟ ದರ್ಜೆಯ ಸಚಿವರಾಗಿರುವ ಧಾರವಾಡ ಸಂಸದ ಪ್ರಹ್ಲಾದ್ ಜೋಶಿಗೆ 3 ಮಹತ್ವದ ಖಾತೆ ದೊರೆತಿದೆ. ಹಿಂದೆ ಕನ್ನಡಿಗರೇ ಆದ ಅನಂತ್ ಕುಮಾರ್ ನಿರ್ವಹಿಸುತ್ತಿದ್ದ ಸಂಸದೀಯ ವ್ಯವಹಾರಗಳ ಖಾತೆ ಜೊತೆಗೆ ಕಲ್ಲಿದ್ದಲು, ಗಣಿ ಖಾತೆ ಜೋಶಿಗೆ ಸಿಕ್ಕಿದೆ. ಹಿಂದಿನ ಸರ್ಕಾರದಲ್ಲಿ ಪಿಯೂಷ್ ಗೋಯಲ್ ಕಲ್ಲಿದ್ದಲು, ನರೇಂದ್ರ ಸಿಂಗ್ ತೋಮರ್ ಗಣಿ ಖಾತೆ ನಿರ್ವಹಿಸಿದ್ದರು.
ಸದಾನಂದಗೌಡಗೆ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ
ಕೇಂದ್ರ ಸಂಪುಟದಲ್ಲಿ 5ನೆಯವರಾಗಿ ಪ್ರಮಾಣವಚನ ಸ್ವೀಕರಿಸಿದ ಬೆಂಗಳೂರು ಉತ್ತರ ಸಂಸದ ಡಿ.ವಿ.ಸದಾನಂದಗೌಡ ಅವರಿಗೆ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ನೀಡಲಾಗಿದೆ. ಕೃಷಿ ಚಟುವಟಿಕೆ ಸಂಬಂಧ ಮಹತ್ವದ ಖಾತೆ ಇದು. ಅಲ್ಲದೆ, ಔಷಧ ದರ ನಿಯಂತ್ರಣವೂ ಇದೇ ಖಾತೆಯಲ್ಲಿರುತ್ತದೆ. ಹಿಂದೆ ಈ ಖಾತೆಗಳನ್ನು ನಿರ್ವಹಿಸಿದ್ದ ಅನಂತ್ ಕುಮಾರ್ ಜನೌಷಧ ಸೇರಿ ಹಲವು ಜನೋಪಕಾರಿ ಕ್ರಮ ಕೈಗೊಂಡದ್ದು ಗಮನಾರ್ಹ.