ಬೆಂಗಳೂರು :  ಸಮ್ಮಿಶ್ರ ಸರ್ಕಾರ ಪತನಗೊಳಿಸುವ ಪ್ರಯತ್ನಕ್ಕೆ ಕೈಹಾಕದಂತೆ ಪಕ್ಷದ ವರಿಷ್ಠರು ಸ್ಪಷ್ಟ ಸೂಚನೆ ನೀಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ತಿಳಿಸಿದ್ದಾರೆ.

ರಾಜ್ಯದಲ್ಲಿನ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಪಕ್ಷಗಳ ನೇತೃತ್ವದ ಸಮ್ಮಿಶ್ರ ಸರ್ಕಾರ ಪತನಗೊಳ್ಳಲಿದೆ ಎಂಬ ವದಂತಿಗಳ ನಡುವೆಯೇ ಯಡಿಯೂರಪ್ಪ ಅವರು ಈ ಹೇಳಿಕೆ ನೀಡಿರುವುದು ರಾಜ್ಯ ರಾಜಕಾರಣದಲ್ಲಿ ಕುತೂಹಲ ಮೂಡಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾಂಗ್ರೆಸ್‌ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಲ್ಕು ಶಾಸಕರನ್ನು ಕಳುಹಿಸಿ ತಮ್ಮ ಬೇಳೆ ಬೇಯಿಸಿ ಕೊಳ್ಳುತ್ತಿದ್ದಾರೆ. ಹೀಗಾಗಿಯೇ ಪಕ್ಷದ ವರಿಷ್ಠರು ಸೂಚನೆ ನೀಡಿದ್ದಾರೆ ಎಂದೂ ಅವರು ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ದೆಹಲಿಯಲ್ಲಿ ನಡೆದ ಕೇಂದ್ರದ ಎನ್‌ಡಿಎ ಸರ್ಕಾರದ ಎರಡನೇ ಅವಧಿಯ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಂಡು ಶುಕ್ರವಾರ ಬೆಂಗಳೂರಿಗೆ ಆಗಮಿಸಿದ ನಂತರ ಯಡಿಯೂರಪ್ಪ ಅವರು ಈ ಹೇಳಿಕೆ ನೀಡಿರುವುದು ನಾನಾ ರೀತಿಯ ವಿಶ್ಲೇಷಣೆಗೆ ನಾಂದಿ ಹಾಡಿದೆ. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರೂ ಈ ಪ್ರಮಾಣಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ಅಧಿಕಾರಕ್ಕಾಗಿ ನಾವು ಹಾತೊರೆಯುವುದಿಲ್ಲ. ಅದರ ಅಗತ್ಯವೂ ನಮಗಿಲ್ಲ. ಮಧ್ಯಂತರ ಚುನಾವಣೆಯ ಬಗ್ಗೆ ಊಹಿಸಿಯೂ ಮಾತನಾಡುವುದಿಲ್ಲ. ಈಗಿರುವ ಪ್ರತಿಪಕ್ಷದ ಸ್ಥಾನದಲ್ಲಿ ಕುಳಿತು ಕೆಲಸ ಮಾಡುವ ಶಕ್ತಿ ನಮಗಿದೆ ಎಂದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಲ್ಕು ಶಾಸಕರನ್ನು ಕಳುಹಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರ ನಡೆ ಏನು ಎಂಬುದು ಮೇಲ್ನೋಟಕ್ಕೆ ನಮಗೆ ಗೊತ್ತಾಗಿದೆ. ಈ ಕಾರಣಕ್ಕಾಗಿಯೇ ಸರ್ಕಾರ ಉರುಳಿಸುವ ಪ್ರಯತ್ನ ಕೈಹಾಕಬೇಡಿ ಎಂಬ ಸೂಚನೆಯನ್ನು ಪಕ್ಷದ ವರಿಷ್ಠರು ನೀಡಿದ್ದಾರೆ ಎಂದು ತಿಳಿಸಿದರು.

ಸಮ್ಮಿಶ್ರ ಸರ್ಕಾರ ಪತನಗೊಳ್ಳಲಿದೆ ಎಂಬ ಮಾತನ್ನು ಚುನಾವಣೆಗೂ ಮೊದಲು ಪ್ರತಿನಿತ್ಯ ಹೇಳುತ್ತಿದ್ದ ಯಡಿಯೂರಪ್ಪ ಅವರ ಮಾತಿನ ಧಾಟಿ ಫಲಿತಾಂಶದ ನಂತರ ಕೊಂಚ ಬದಲಾಗಿತ್ತು. ಮಿತ್ರ ಪಕ್ಷಗಳು ಏನು ಮಾಡುತ್ತವೆ ಎಂಬುದನ್ನು ಕಾದು ನೋಡೋಣ ಎನ್ನುತ್ತಿದ್ದ ಅವರು ಇದೀಗ ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ಮರುದಿನದಿಂದಲೇ ವರಸೆ ಬದಲಿಸಿರುವುದು ಜೆಡಿಎಸ್‌ ಮತ್ತು ಕಾಂಗ್ರೆಸ್‌ ಪಕ್ಷಗಳ ನಾಯಕರಿಗೂ ಸೋಜಿಗವಾಗಿದೆ.

ಬಿಎಸ್‌ವೈ ಹೇಳಿಕೆಗೆ ಏನು ಕಾರಣ?

1. ಕಾದು ನೋಡುವ ತಂತ್ರದ ಭಾಗವಾಗಿರಬಹುದು. ಹೀಗೆ ಹೇಳುವುದರಿಂದ ಅಸಮಾಧಾನ ಹೋಗಲಾಡಿಸುವ ಉದ್ದೇಶದಿಂದ ಸಂಪುಟ ಪುನಾರಚನೆಯ ಕಸರತ್ತಿನಲ್ಲಿರುವ ಆಡಳಿತಾರೂಢ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಪಕ್ಷಗಳು ಪ್ರಯತ್ನ ಕೈಬಿಟ್ಟು ನಿರಾಳರಾಗಬಹುದು. ಆಗ ಅತೃಪ್ತ ಶಾಸಕರು ಬೇಸರಗೊಂಡು ಹೊರಬರಬಹುದು.

2. ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇದೀಗ ತಾನೆ ಅಸ್ತಿತ್ವಕ್ಕೆ ಬಂದಿದೆ. ಜೂ.17ರಿಂದ 26ರವರೆಗೆ ಹೊಸ ಸರ್ಕಾರದ ಮೊದಲ ಸಂಸತ್‌ ಅಧಿವೇಶನ. ನಂತರ ಜುಲೈನಲ್ಲಿ ಕೇಂದ್ರದ ಬಜೆಟ್‌ ಮಂಡನೆಯಾಗಲಿದೆ. ಅಲ್ಲಿವರೆಗೆ ಗೊಂದಲ ಬೇಡ ಎಂಬ ನಿಲುವಿಗೆ ಬಂದಿರಬಹುದು.

3. ಸರ್ಕಾರ ಪತನಗೊಳ್ಳಲು ಅಗತ್ಯವಾದಷ್ಟುಸಂಖ್ಯೆಯ ಶಾಸಕರು ಆಡಳಿತಾರೂಢ ಪಕ್ಷಗಳಿಂದ ಹೊರಬರಲು ಹಿಂದೇಟು ಹಾಕುತ್ತಿರಬಹುದು. ನಾಲ್ಕೈದು ಶಾಸಕರಷ್ಟೇ ಹೊರಬಂದರೆ ಸರ್ಕಾರ ಅಭದ್ರವಾಗುವುದಿಲ್ಲ ಎಂಬುದು ಮನವರಿಕೆಯಾಗಿರಬಹುದು.

4. ಅನ್ಯಪಕ್ಷಗಳಿಂದ ಹೊರಬರುವ ಶಾಸಕರ ನೆರವಿನಿಂದ ಪರ್ಯಾಯ ಸರ್ಕಾರ ರಚಿಸುವುದರಿಂದ ಮತ್ತೆ ಉತ್ತಮ ಆಡಳಿತ ನೀಡಲು ಸಾಧ್ಯವಾಗಲಿಕ್ಕಿಲ್ಲ. ಅದರ ಬದಲು ಕಾದು ನೋಡಿ ಮಧ್ಯಂತರ ಚುನಾವಣೆ ಎದುರಿಸುವುದೇ ಸೂಕ್ತ ಎಂಬ ನಿಲುವಿಗೆ ಬಂದಿರಬಹುದು.