ನವದೆಹಲಿ: 2017-18ನೇ ಸಾಲಿನಲ್ಲಿ ದೇಶದಲ್ಲಿ ನಿರುದ್ಯೋಗ ದರವು ಶೇ.6.1ರಷ್ಟುಇದ್ದು ಕಳೆದ 45 ವರ್ಷಗಳಲ್ಲೇ ಗರಿಷ್ಠ ಪ್ರಮಾಣ ಎಂಬುದು ಇದೀಗ ಖಚಿತವಾಗಿದೆ. ಲೋಕಸಭಾ ಚುನಾವಣೆಗೂ ಮುನ್ನ ಇದೇ ಮಾಹಿತಿಗಳನ್ನು ಒಳಗೊಂಡ ವರದಿ ಸೋರಿಕೆಯಾಗಿತ್ತು. ಇದೀಗ ಸರ್ಕಾರವೇ ಅಧಿಕೃತವಾಗಿ ಆ ವರದಿಯನ್ನು ಬಿಡುಗಡೆ ಮಾಡಿದೆ.
2017ರ ಜುಲೈನಿಂದ 2018ರ ಜೂನ್‌ವರೆಗೆ ನಡೆಸಿದ ಪಿಎಲ್‌ಎಫ್‌ಎಸ್ (ಪೀರಿಯಾಡಿಕ್ ಲೇಬರ್ ಪೋರ್ಸ್ ಸರ್ವೇ) ಸಮೀಕ್ಷೆ ಅನ್ವಯ ನಗರ ಪ್ರದೇಶಗಳ ಉದ್ಯೋಗ ಮಾಡುವ ಅರ್ಹತೆ ಹೊಂದಿದವರ ಪೈಕಿ ಶೇ.7.8ರಷ್ಟುಜನ ಮತ್ತು ಗ್ರಾಮೀಣ ಭಾಗದಲ್ಲಿ ಶೇ.5.3ರಷ್ಟುನಿರುದ್ಯೋಗಿಗಳಾಗಿದ್ದಾರೆ. ಒಟ್ಟಾರೆ ಯುವಕರಲ್ಲಿ ನಿರುದ್ಯೋಗ ಪ್ರಮಾಣ ಶೇ.6.2ರಷ್ಟುಇದ್ದರೆ, ಮಹಿಳೆಯರಲ್ಲಿ ಈ ಪ್ರಮಾಣ ಶೇ.5.7ರಷ್ಟಿದೆ ಎಂದು ವರದಿ ಹೇಳಿತ್ತು. ಆ ವರದಿಯನ್ನು ಹಿಂದಿನ ವರದಿಗಳಿಗೆ ಹೋಲಿಕೆ ಮಾಡಿ, ಅದು 45 ವರ್ಷಗಳಲ್ಲೇ ಗರಿಷ್ಠ ಪ್ರಮಾಣದ್ದು ಎಂದು ಹೇಳಲಾಗಿತ್ತು.
ಅದೇ ವರದಿಯನ್ನು ಸರ್ಕಾರ ಇದೀಗ ಬಿಡುಗಡೆ ಮಾಡಿದೆ. ಆದರೆ ನಿರುದ್ಯೋಗ ಪ್ರಮಾಣವನ್ನು 45 ವರ್ಷಗಳ ಗರಿಷ್ಠ ಎಂದು ಹೇಳಲಾಗದು. ಹಿಂದಿನ ಲೆಕ್ಕಾಚಾರದ ಮಾದರಿಯೇ ಬೇರೆ ಇತ್ತು. ಈಗಿನ ಲೆಕ್ಕಾಚಾರದ ಮಾದರಿಯೇ ಬೇರೆ ಇದೆ ಎಂದು ಸರ್ಕಾರಿ ಹೇಳಿಕೊಂಡಿದೆ.
ಜಿಡಿಪಿ ಪ್ರಗತಿ ದರ 5 ವರ್ಷಗಳ ಕನಿಷ್ಠ
ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬರುತ್ತಲೇ, ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ. ಕಳೆದ ಜನವರಿ – ಮಾರ್ಚ್ ತ್ರೈಮಾಸಿಕದ ಜಿಡಿಪಿ ಪ್ರಗತಿ ದರವು ಶೇ.5.8ಕ್ಕೆ ಇಳಿದಿದೆ. ಹಿಂದಿನ ಅಕ್ಟೋಬರ್ – ಡಿಸೆಂಬರ್ ತ್ರೈಮಾಸಿಕದಲ್ಲಿ ಜಿಡಿಪಿ ಪ್ರಗತಿ ದರ ಶೇ.6.6ರಷ್ಟಿತ್ತು. ಇದು ಕಳೆದ 5 ವರ್ಷಗಳಲ್ಲೇ ಅತ್ಯಂತ ಕನಿಷ್ಠ ಜಿಡಿಪಿ ಪ್ರಗತಿ ದರವಾಗಿದೆ. 2013-14ರಲ್ಲಿ ಶೇ.6.4ರಷ್ಟುಜಿಡಿಪಿ ದರ ದಾಖಲಾಗಿದ್ದು ಹಿಂದಿನ ಕನಿಷ್ಠವಾಗಿತ್ತು. ಕೃಷಿ ಮತ್ತು ಉತ್ಪಾದನಾ ವಲಯದ ಕಳಪೆ ಸಾಧನೆಯಿಂದಾಗಿ ಕಳೆದ ಹಣಕಾಸು ವರ್ಷದ ಕಡೆಯ ತ್ರೈಮಾಸಿಕದಲ್ಲಿ ಇಳಿಕೆ ದಾಖಲಾಗಿದೆ ಎಂದು ಸರ್ಕಾರ ಹೇಳಿದೆ. ಜೊತೆಗೆ 2018-19ನೇ ಸಾಲಿನ ಜಿಡಿಪಿ ಪ್ರಗತಿ ದರದಲ್ಲಿ, ಕಳೆದ 2 ವರ್ಷಗಳಲ್ಲೇ ಮೊದಲ ಬಾರಿಗೆ ಭಾರತವನ್ನು ಚೀನಾ ಹಿಂದಿಕ್ಕಿದೆ. ಚೀನಾದಲ್ಲಿ ಇದೇ ಅವಧಿಯಲ್ಲಿ ಶೇ.6.4ರಷ್ಟುಪ್ರಗತಿ ದಾಖಲಾಗಿದೆ.