ಮಳೆಗಾಲದಲ್ಲಿ ಸಂಭವಿಸುವ ಪ್ರಾಕೃತಿಕ ವಿಕೋಪಗಳು, ಸಿಡಿಲು ಬಡಿತದಂತಹ ಅವಘಡಗಳು ಸಂಭವಿಸದರೆ ಕೂಡಲೇ ಅಧಿಕಾರಿಗಳು ಭೇಟಿ ನೀಡಬೇಕು. ಅಲ್ಲದೇ ತೊಂದರೆಗೊಳಗಾದ ಕುಟುಂಬ ನೆಮ್ಮದಿಯಿಂದ ಜೀವನ ನಡೆಸುವ ರೀತಿಯಲ್ಲಿ ಗ್ರಾಮ ಪಂಚಾಯತ್ ಅಧಿಕಾರಿಗಳು ಅವಘಡಗಳ ಬಗ್ಗೆ ವರದಿ ಸಲ್ಲಿಸಬೇಕು ಎಂದು ನಗರಾಭಿವೃದ್ದಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಹೇಳಿದರು.
ಅವರು ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಕುಡಿಯುವ ನೀರಿನ ಸಮಸ್ಯೆ ಮತ್ತು ಪ್ರಾಕೃತಿಕ ವಿಕೋಪ ಮುಂಜಾಗೃತ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಅವಘಡಗಳು ಸಂಭವಿಸಿದ ಕೂಡಲೇ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಸರಿಯಾಗಿ ವರದಿ ಸಲ್ಲಿಸಬೇಕು ಎಂದು ಸೂಚನೆ ನೀಡಿದರು. ಅಲ್ಲದೇ ಖಾಸಾಗಿ ಸ್ಥಳಗಳಲ್ಲಿ ಇರುವ ಅಪಾಯಕಾರಿ ಗುಡ್ಡ ಅಥವಾ ಮರಗಳನ್ನು ತೆರವನ್ನು ಖಾಸಾಗಿ ಸ್ಥಳದವರೇ ಮಾಡಬೇಕು. ಇದರಿಂದ ಇತರ ಕುಟುಂಬದವರಿಗೆ ತೊಂದರೆ ಆದರೆ ಅಂತವರ ವಿರುದ್ದ ಕ್ರಿಮಿನಲ್ ಕೇಸು ದಾಖಲಿಸಲಾಗುವುದು ಎಂದು ಇದೇ ಸಂದರ್ಭದಲ್ಲಿ ಹೇಳಿದರು. ಪ್ರಾಕೃತಿಕ ವಿಕೋಪಗಳನ್ನು ಎದುರಿಸಲು ತಾಲೂಕು ಆಡಳಿತ ಯಾವ ರೀತಿ ಸಿದ್ದವಾಗಿದೆ ಎಂಬುದನ್ನು ತಹಶೀಲ್ದಾರ್ ಅವರಲ್ಲಿ ವಿಚಾರಿಸಿ ಮಾಹಿತಿ ಪಡೆದುಕೊಂಡರು.
ತಹಶೀಲ್ದಾರ್ ಕುಂಞ ಆಹಮ್ಮದ್ ಮಾತನಾಡಿ ಈಗಾಗಲೇ ತಾಲೂಕಿನಲ್ಲಿ ಪ್ರಾಕೃತಿಕ ವಿಕೋಪಗಳು ಸಂಭವಿಸುವ ಮೊದಲೇ ತಾಲೂಕು ಆಡಳಿತ 28 ಗ್ರಾಮ ಪಂಚಾಯತ್‍ಗಳಲ್ಲಿ ಕೂಡ ಸಿದ್ದವಾಗಿದೆ. ತಾಲೂಕಿನ 28 ಗ್ರಾಮ ಪಂಚಾಯತ್‍ಗಳಲ್ಲಿ ಪ್ರಾಕೃತಿಕ ವಿಕೋಪ ತಂಡವನ್ನು ರಚಿಸಲಾಗಿದೆ ಎಂದು ಹೇಳಿದರು.
ನಗರ ಪಂಚಾಯತ್ ಸದಸ್ಯ ಎಂ. ವೆಂಕಪ್ಪ ಗೌಡ ಮಾತನಾಡಿ ಕಳೆದ ಬಾರಿ ಸಂಭವಿಸಿದ ಪ್ರಾಕೃತಿಕ ವಿಕೋಪದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಾನಿ ಆದ ಸಂಪಾಜೆ, ಕಲ್ಮಕಾರು, ಕೊಲ್ಲಮೊಗ್ರ ಮತ್ತು ಮಡಪ್ಪಾಡಿ ಗ್ರಾಮಗಳ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಬೇಕು. ಅಲ್ಲದೇ ವಿದ್ಯುತ್ ತಂತಿಗಳು ಹಾದು ಹೋಗುವ ಸ್ಥಳಗಳಲ್ಲಿ ಇರುವ ಮರದ ಗೆಲ್ಲುಗಳನ್ನು ಕಡಿಯಬೇಕು. ಎಂದು ಹೇಳಿದರು.
ಮಳೆಗಾಲದಲ್ಲಿ ಜ್ವರಗಳು ಬರದಂತೆ ಆರೋಗ್ಯ ಇಲಾಖೆ ಎಚ್ಚರವಹಿಸಬೇಕು. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸೊಳ್ಳೆ ಉತ್ಪತ್ತಿಕೇಂದ್ರಗಳನ್ನು ಫಾಗಿಂಗ್ ಮೂಲಕ ಸೊಳ್ಳೆಗಳ ನಿಯಂತ್ರಣ ಮಾಡಬೇಕು. ಯಾವ ಕಡೆ ಕೂಡ ಜ್ವರದ ಬಗ್ಗೆ ವರದಿಗಳು ಬರಬಾರದು ಎಂದು ಸಚಿವರು ಹೇಳಿದರು. ಇದಕ್ಕೆ ಉತ್ತರಿಸಿದ ಆರೋಗ್ಯಾಧಿಕಾರಿಗಳು ತಾಲೂಕಿನಲ್ಲಿ ಇಲ್ಲಿಯವರೆಗೆ ಜ್ವರದ ಲಕ್ಷಣಗಳು ಕಂಡುಬಂದಿಲ್ಲ. ಅಂತಹ ಘಟನೆಗಳು ಸಂಭವಿಸುವ ಮೊದಲೇ ಆರೋಗ್ಯ ಇಲಾಖೆಯ ಕಡೆಯಿಂದ ಪ್ರತಿ ಗ್ರಾಮ ಮಟ್ಟದಲ್ಲಿ ಫಾಗಿಂಗ್ ನಡೆಸಲಾಗುವುದು ಎಂದರು.
ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗಬಾರದು ಇದಕ್ಕಾಗಿ ನಗರ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಕುಡಿಯುವ ನೀರಿನ ಬಗ್ಗೆ ಯಾವ ರೀತಿಯ ಕ್ರಮ ಕೈಗೊಂಡಿದ್ದಿರಿ ಎಂಬುದನ್ನು ನಗರ ಪಂಚಾಯತ್ ಇಂಜಿನಿಯರ್‍ರಲ್ಲಿ ಮಾಹಿತಿ ಪಡೆದುಕೊಂಡರು. ನಗರ ಪ್ರದೇಶದಲ್ಲಿ 2 ದಿನಗಳಿಗೊಮ್ಮೆ ನೀರಿನ್ನು ನೀಡುತ್ತಿದ್ದೇವೆ. ಪಯಸ್ವಿನಿ ನದಿಯಲ್ಲಿ ಸ್ವಲ್ಪ ಮಟ್ಟಿಗೆ ನೀರಿನ ಪ್ರಮಾಣ ಹೆಚ್ಚಾಗಿದೆ. ಇದರಿಂದ ನೀರಿನ ಸಮಸ್ಯೆ ಸದ್ಯದ ಮಟ್ಟಿಗೆ ನಗರಕ್ಕೆ ಇಲ್ಲ. ಅಲ್ಲದೇ ನಗರದಲ್ಲಿ 45 ಬೋರ್‍ವೆಲ್ ಮತ್ತು 2 ತೆರೆದ ಬಾವಿಗಳನ್ನು ನೀರಿಗಾಗಿ ಆವಲಂಬಿಸಿದ್ದೇವೆ ಎಂದು ಇಂಜಿನಿಯರ್ ಮಾಹಿತಿ ನೀಡಿದರು.
ಸುಳ್ಯ ನಗರದಲ್ಲಿ ಸರಿಯಾದ ಶುದ್ದಿಕರಣ ಘಟಕ ಇಲ್ಲ. ಈಗಿರುವ ಶುದ್ದಿಕರಣ ಘಟಕದಲ್ಲಿ ನೀರು ಶುದ್ದಿಕರಣ ಆಗುತ್ತಿಲ್ಲ. ಇದರಿಂದ ನಗರದ ಜನರು ಕೆಂಪು ಮಿಶ್ರಿತ ನೀರನ್ನೇ ಕುಡಿಯುತ್ತಿದ್ದಾರೆ. ಆದಷ್ಠೂ ಬೇಗ ಸುಳ್ಯಕ್ಕೆ ಕುಡಿಯುವ ನೀರಿನ ಶುದ್ದಿಕರಣ ಘಟಕ ಆಗಬೇಕು ಎಂದು ನಗರ ಪಂಚಾಯತ್ ಸದಸ್ಯ ಎಂ. ವೆಂಕಪ್ಪ ಗೌಡ ಆಗ್ರಹಿಸಿದರು. ಅಲ್ಲದೇ ಪಯಸ್ವಿನಿಗೆ ಶಾಶ್ವತ ವೆಂಟೆಡ್ ಡ್ಯಾಂ ನಿರ್ಮಾಣ ಆಗಬೇಕು ಎಂದು ಹೇಳಿದರು. ಈ ಬಗ್ಗೆ ಸೂಕ್ತವಾದ ಯೋಜನೆಯೊಂದನ್ನು ರಚಿಸಲು ಸಚಿವರು ಸಲಹೆ ನೀಡಿದರು. ಅಲ್ಲದೇ ನಗರದ ಘನತ್ಯಾಜ್ಯ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸುವ ನಿಟ್ಟಿನಲ್ಲಿ ನಗರಾಡಳಿತ ಮತ್ತು ತಹಶೀಲ್ದಾರ್ ಅವರು ಸೇರಿ ಕಸಗಳನ್ನು ಸುರಿಯಲು ಶಾಶ್ವತ ಜಾಗವನ್ನು ಗುರುತು ಮಾಡಿ ಎಂದು ಸೂಚಿಸಿದರು.
ಸಭೆಯ ಅಧ್ಯಕ್ಷತೆಯನ್ನು ಶಾಸಕ ಎಸ್. ಅಂಗಾರ ವಹಿಸಿದ್ದರು. ತಾಲೂಕು ಪಂಚಾಯತ್ ಅಧ್ಯಕ್ಷ ಚನಿಯ ಕಲ್ತಡ್ಕ, ತಹಶೀಲ್ದಾರ್ ಕುಂಞ ಅಹಮ್ಮದ್, ತಾ.ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಮಧುಕುಮಾರ್, ಜಿ.ಪಂ ಸದಸ್ಯ ಎಸ್.ಎನ್.ಮನ್ಮಥ, ಪುಷ್ಪಾವತಿ ಬಾಳಿಲ, ನ.ಪಂ ಸದಸ್ಯರಾದ ಎಂ.ವೆಂಕಪ್ಪ ಗೌಡ, ಬಾಲಕೃಷ್ಣ ಭಟ್, ಡೇವಿಡ್ ಧೀರಾ ಕ್ರಾಸ್ತ, ಶರೀಫ್ ಕಂಠಿ, ಪ್ರಮುಖರಾದ ಟಿ.ಎಂ. ಶಹೀದ್, ಎಂ.ಬಿ.ಸದಾಶಿವ, ಸಂತೋಷ್ ಜಾಕೆ, ಭಾಗೀರಥಿ ಮುರುಳ್ಯ, ಶಾಫಿ ಕುತ್ತಮೊಟ್ಟೆ, ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.