ಪ್ರಾಥಮಿಕ-ಪ್ರೌಢ ಶಾಲಾ ಶಿಕ್ಷಕರ ಕಾರ್ಯಾಗಾರ: ಭಾರತದ ಸಂಸ್ಕಾರ, ಆಧ್ಯಾತ್ಮದ ಮೇಲೆ ಹೆಚ್ಚಿದ ಒಲವು: ಡಾ.ಕೆ.ಎಂ.ಕೃಷ್ಣ ಭಟ್ – ಕಹಳೆ ನ್ಯೂಸ್
ಪುತ್ತೂರು: ಭಾರತ ವಿಶ್ವದ ಗಮನ ಸೆಳೆಯುತ್ತಿದೆ. ನಮ್ಮ ದೇಶದ ವೈಚಾರಿಕತೆ, ಯೋಗ, ಸಂಸ್ಕಾರ ಹಾಗೂ ಆಧ್ಯಾತ್ಮ ವಿಜ್ಞಾನ ಇಂದು ಜಗತ್ತೆ ಅಪೇಕ್ಷೆಪಡುತ್ತಿದೆ. ಈ ಹಿನ್ನೆಲೆಯಲ್ಲಿ ವಿದ್ಯಾ ಸಂಸ್ಥೆಗಳಲ್ಲಿ ಪಠ್ಯದ ಜೊತೆಗೆ ಇಂತಹ ನೈತಿಕ ಶಿಕ್ಷಣವನ್ನು ನೀಡುವಂತಾಗಬೇಕು ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೆ. ಎಂ. ಕೃಷ್ಣ ಭಟ್ ಅಭಿಪ್ರಾಯಪಟ್ಟರು.
ಅವರು ಇಲ್ಲಿನ ವಿವೇಕಾನಂದ ಧ್ಯಾನಮಂದಿರದಲ್ಲಿ ನಡೆದ ವಿವೇಕಾನಂದ ವಿದ್ಯಾವರ್ಧಕ ಸಂಘ ನಡೆಸುತ್ತಿರುವ 29 ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ 2019-20 ಶೈಕ್ಷಣಿಕ ವರ್ಷದಲ್ಲಿ ಯೋಗ, ನೈತಿಕ ಮತ್ತು ಆಧ್ಯಾತ್ಮಿಕ ಶಿಕ್ಷಣವನ್ನು ಬೋಧಿಸುವ ಶಿಕ್ಷಕರ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣ ಸಂಯೋಜಕರಾದ ವೆಂಕಟ್ರಮಣ ರಾವ್, ಭಗಿನಿ ಮೀನಾಕ್ಷಿ ಕಾರ್ಯಾಗಾರವನ್ನು ನಡೆಸಿದರು.
ಕಾರ್ಯಾಗಾರದ ಸಮಾರೋಪ ಕಾರ್ಯಕ್ರಮದಲ್ಲಿ ವಿವೇಕಾನಂದ ವಿದ್ಯಾವಧರ್ಕ ಸಂಘದ ನಿರ್ದೇಶಕ ಶಿವಪ್ರಸಾದ್ ಇ. ಅವರು ಮಾತನಾಡಿ, ಶಿಕ್ಷಕ ನಿರಂತರ ಅಧ್ಯಯನ ಶೀಲನಾಗಿರಬೇಕು. ಶಾಲೆಯ ಈ ಶೈಕ್ಷಣಿಕ ವರ್ಷದಲ್ಲಿನ ಯೋಗ, ಸಂಸ್ಕಾರ ಮತ್ತು ಆಧ್ಯಾತ್ಮಿಕ ಶಿಕ್ಷಣದ ವಾರ್ಷಿಕ ಯೋಜನೆಯನ್ನು ಯಶಸ್ವಿಗೊಳಿಸಿ ವ್ಯಕ್ತಿ ನಿರ್ಮಾಣದ ಕೆಲಸ ಮಾಡಬೇಕೆಂದು ತಿಳಿಸಿದರು.
ಯೋಗ ಶಿಕ್ಷಣ ಪರಿವೀಕ್ಷಕ ಚಂದ್ರಶೇಖರ ಅವರು ಕಾರ್ಯಕ್ರಮ ನಿರ್ವಹಿಸಿದರು.