ನವದೆಹಲಿ: ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಜನಪ್ರಿಯ ಯೋಜನೆಗಳ ಮೊರೆ ಹೋಗುತ್ತಿರುವಂತಿದೆ. ಆದರ ಆರಂಭಿಕ ಯತ್ನವಾಗಿ, ಮಹಿಳೆಯರಿಗೆ ಬಸ್ ಹಾಗೂ ಮೆಟ್ರೋ ರೈಲುಗಳಲ್ಲಿ ಉಚಿತ ಪ್ರಯಾಣ ಅವಕಾಶ ಕಲ್ಪಿಸಲು ಚಿಂತನೆ ನಡೆಸಿದೆ. ಅಲ್ಲದೆ, ಮಾಸಿಕ ಕನಿಷ್ಠ ವಿದ್ಯುತ್ ದರವನ್ನೂ ಕಡಿತಗೊಳಿಸಲು ಮುಂದಾಗಿದೆ.
ಈ ಬಗ್ಗೆ ಮಾತನಾಡಿರುವ ಕೇಜ್ರಿವಾಲ್, ‘ಬಸ್ ಹಾಗೂ ಮೆಟ್ರೋ ಸೇವೆಯನ್ನು ಬಳಸುವಂತೆ ಉತ್ತೇಜನ ನೀಡಲು ಮಹಿಳೆಯರಿಗೆ ಈ ಸೇವೆಯನ್ನು ಉಚಿತಗೊಳಿಸಲು ಪರಿಶೀಲಿಸಲಾಗುತ್ತಿದೆ. ಸೋಮವಾರ ಈ ಬಗ್ಗೆ ಘೋಷಣೆ ಮಾಡಲಾಗುತ್ತದೆ’ ಎಂದಿದ್ದಾರೆ. ಸಾರಿಗೆ ಸಚಿವ ಕೈಲಾಶ್ ಗೆಹ್ಲೋಟ್ ಅವರು ಈ ಸಂಬಂಧ ಈಗಾಗಲೇ ಬಸ್ ನಿಗಮ ಹಾಗೂ ಮೆಟ್ರೋ ಅಧಿಕಾರಿಗಳ ಜತೆ ಸಭೆ ನಡೆಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಬಸ್ ಹಾಗೂ ಮೆಟ್ರೋ ನಿಗಮಗಳು ಅವಕಾಶ ಕಲ್ಪಿಸಿದರೆ, ಅವುಗಳಿಗೆ ಆಗುವ ನಷ್ಟವನ್ನು ದೆಹಲಿ ಸರ್ಕಾರ ಭರಿಸಿಕೊಡುವ ಸಂಭವವಿದೆ ಎಂದು ಮೂಲಗಳು ತಿಳಿಸಿವೆ. ದೆಹಲಿ ಮೆಟ್ರೋದಲ್ಲಿ ನಿತ್ಯ 30 ಲಕ್ಷ ಮಂದಿ ಪ್ರಯಾಣಿಸುತ್ತಾರೆ. ಬಸ್‌ಗಳಲ್ಲಿ 42 ಲಕ್ಷ ಜನರು ಓಡಾಡುತ್ತಾರೆ.
ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸುವುದರಿಂದ ಎಷ್ಟು ನಷ್ಟವಾಗುತ್ತದೆ ಎಂಬುದನ್ನು ಅರಿಯಲು ಹೊಸದಾಗಿ ಸಮೀಕ್ಷೆ ನಡೆಸಬೇಕಾಗಿದೆ ಎಂದು ವರದಿಗಳು ಹೇಳಿವೆ. ದೆಹಲಿಯಲ್ಲಿ ಬಸ್‌ಗಳಲ್ಲಿ ಪ್ರಯಾಣಿಸುವ ಮಹಿಳೆಯರ ಸಂಖ್ಯೆ ಶೇ. 20 ಮೀರುವುದಿಲ್ಲ ಎಂದು ಕೆಲ ಅಧಿಕಾರಿಗಳು ಹೇಳಿದ್ದಾರೆ.
ಈ ನಡುವೆ, ದೆಹಲಿ ಸರ್ಕಾರದ ಜತೆ ಸಮಾಲೋಚನೆ ನಡೆಸದೇ ದೆಹಲಿ ವಿದ್ಯುಚ್ಛಕ್ತಿ ಪ್ರಾಧಿಕಾರ 2 ಕಿಲೋವ್ಯಾಟ್ ವರೆಗಿನ ವಿದ್ಯುತ್ ನಿಶ್ಚಿತ ಶುಲ್ಕವನ್ನು 20 ರು.ನಿಂದ 125 ರು.ಗೆ ಏರಿಕೆ ಮಾಡಿದೆ. ಈ ದರವನ್ನು ಕಡಿತಗೊಳಿಸುವಂತೆ ಮನವಿ ಮಾಡಿದ್ದೇವೆ. ಪ್ರಾಧಿಕಾರ ಒಪ್ಪುವ ಸಾಧ್ಯತೆ ಇದೆ ಎಂದಿದ್ದಾರೆ. 2020 ರ ಜನವರಿ-ಫೆಬ್ರವರಿಯಲ್ಲಿ ದೆಹಲಿಯಲ್ಲಿ ವಿಧಾನಸಭೆ ಚುನಾವಣೆ ನಡೆಯಬೇಕಿದೆ.
2015 ರ ವಿಧಾನಸಭೆ ಚುನಾವಣೆಯಲ್ಲಿ ಬಡವರಿಗೆ ಉಚಿತ ವಿದ್ಯುತ್, ಉಚಿತ ನೀರು ಸರಬರಾಜು ಘೋಷಣೆ ಮಾಡುವ ಮೂಲಕ ದೆಹಲಿಯ 70 ವಿಧಾನಸಭಾ ಕ್ಷೇತ್ರಗಳ ಪೈಕಿ 67 ರಲ್ಲಿ ಜಯ ಗಳಿಸಿ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ದೇಶದಲ್ಲಿ ಹೊಸದೊಂದು ಇತಿಹಾಸ ಸೃಷ್ಟಿಸಿತ್ತು.