ಮಂಜಿನ ಮಲ್ಲಿಗೆ ಮುತ್ತಿನ ತೆರದಿ ಹೊಳೆ ಹೊಳೆವುದು ತಾ ನೋಡ|
ಮೊಸರಿನ ಗಡಿಗೆ ಒಡೆಯಿತೊ ಎದರೇ ಬಾನಂಗಳದಿ ತಿಳಿಮೋಡ ||
ನಂದನವನದಾ ಗೋಪಗೋಪಿಯರ ನವರಸನಾಟಕ ಹೊಂಗಿರಣ|
ಅರುಣೋದಯದಾ ಹೊನ್ನ ಶರಧಿಯೊಳು ಜಗಮಗಿಸಿದೆ ತಾ ಅರುಣ||೧||
ಹಕ್ಕಿಯು ಗೂಡನು ಬಿಟ್ಟಿತು ನೋಡು ಅವಸರದವಸರದಲಿ ಈಗ |
ದಿಕ್ಕನು ತೋಚದೆ ಕಂಗೆಡಲಾರವು ಮುಂದಿನ ಬದುಕಿಗೆ ಅದೆ ರಾಗ ||
ದೂರದ ಊರನು ಸೇರುವ ಪಯಣ ಸಾಗರದಾಚಿನ ನವಯುಗಕೆ|
ಬರೆದಿದೆ ಮುನ್ನುಡಿ ಕಲರವದಲಿ ತಾ ಅರುಣೋದಯದಾ ನವಪದಕೆ||೨||
ರಂಗೋಲಿಯ ಬರೆದರು ಹೆಂಗಳೆಯರುತಾ ಮುಂದಣ ಬಾಗಿಲ ಹೊಸ್ತಿಲಲಿ|
ಶೃಂಗಾರದ ಜೋಗುಳ ಪಾಡುತ ಪಾಡುತಲಿ ಮಧ್ಯಮ ಪಂಚಮ ರಾಗದಲಿ||
ಅಂಬಾ ಎಂಬ ಕರುವಿನ ಕೂಗು ಕರೆಯಿತು ಅಮೃತ ಘಳಿಗೆಯಲಿ|
ತಣ್ಣನೆ ಗಾಳಿ ಬೀಸುತಾ ಬೀಸುತಾ ನಿದಿರಾ ದೇವಿಯ ಸಹಮತದಲ್ಲಿ||೩||
ಮುಂಗೋಳಿಯು ಸ್ವರವನು ಸೇರಿಸಿ ಕುಣಿಯಿತು ನಸುಕಿನ ವೇಳೆಯಲಿ|
ಕಣ್ಣನು ತೆರೆದರೆ ಉಷೆ ನಗುತಿಹಳು ಸ್ವರ್ಣದ ಬಾಗಿಲ ತೆರೆಯುತಲಿ||
ಲಕ್ಷ್ಮೀ ದೇವಿಯು ಒಳ ಬರಲೆಂದು ಪತಿನಾರಾಯಣ ಜೊತೆಗೂಡಿ|
ದೇವರ ಮನೆಯಾ ಜ್ಯೋತಿಯ ಬೆಳಗಿಸಿ ಸುಪ್ರಭಾತ ತಾ ಹಾಡಿ||೪||