ಶಿಕ್ಷಣ ಕ್ಷೇತ್ರದಲ್ಲಿ ಹಿಂದಿ ಹೇರಿಕೆಯ ವಿರುದ್ಧ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ಸಂಘ-ಸಂಸ್ಥೆಗಳು, ರಾಜಕೀಯ ಪಕ್ಷಗಳು ಎತ್ತಿದ್ದ ವಿರೋಧದ ಧ್ವನಿಗೆ ಹಾಗೂ ಭಾಷಾ ಸ್ವಾಭಿಮಾನಕ್ಕೆ ಜಯ ಸಿಕ್ಕಿದೆ. 2019ರ ರಾಷ್ಟ್ರೀಯ ಶಿಕ್ಷಣ ನೀತಿಯ ಕರಡು ಪ್ರತಿಯಲ್ಲಿ ಹಿಂದಿ ಭಾಷಿಗರು ಇಲ್ಲದ ಪ್ರಾಂತ್ಯಗಳಲ್ಲೂ ತ್ರಿಭಾಷಾ ಸೂತ್ರದಡಿ ಹಿಂದಿ ಕಲಿಕೆಯನ್ನು ಕಡ್ಡಾಯಗೊಳಿಸುವಂತೆ ಮಾಡಲಾಗಿದ್ದ ಶಿಫಾರಸನ್ನು ಕೇಂದ್ರ ಸರ್ಕಾರ ತಿದ್ದುಪಡಿ ಮಾಡಿದೆ.
ಹೊಸ ಕರಡಿನಲ್ಲಿ ‘ತ್ರಿಭಾಷಾ ಸೂತ್ರ’ವನ್ನು ಹಾಗೇ ಉಳಿಸಿಕೊಳ್ಳಲಾಗಿದೆಯಾದರೂ, ‘ಮೂರು ಭಾಷೆಗಳನ್ನು ಕಲಿಯುವ ಯಾವುದೇ ವಿದ್ಯಾರ್ಥಿ, 6ನೇ ಅಥವಾ 7ನೇ ತರಗತಿಗೆ ಬಂದಾಗ ಒಂದು ಅಥವಾ ಒಂದಕ್ಕಿಂತ ಹೆಚ್ಚು ಭಾಷೆಗಳನ್ನು ಬದಲಾಯಿಸಬಹುದು. ಹೊಸ ಭಾಷೆಗಳ ಆಯ್ಕೆಯ ವೇಳೆ, ಹಿಂದಿ ಸೇರಿದಂತೆ ಭಾರತದ ಯಾವುದೇ ಪ್ರಾಂತೀಯ ಭಾಷೆಯನ್ನು ಆ ವಿದ್ಯಾರ್ಥಿ ಆಯ್ಕೆ ಮಾಡಿಕೊಳ್ಳಬಹುದು’ ಎಂದು ತಿದ್ದುಪಡಿಯಲ್ಲಿ ಉಲ್ಲೇಖಿಸಲಾಗಿದೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಮಾಜಿ ಅಧ್ಯಕ್ಷ ಕೆ. ಕಸ್ತೂರಿ ರಂಗನ್ ನೇತೃತ್ವದ ಸಮಿತಿ ರೂಪಿಸಿದ್ದ 2019ರ ರಾಷ್ಟ್ರೀಯ ಶಿಕ್ಷಣ ನೀತಿಯ ಕರಡು ಶುಕ್ರವಾರ ಪ್ರಕಟಗೊಂಡಿತ್ತು. ಇದರ ಬೆನ್ನಲ್ಲೇ ತಮಿಳುನಾಡಿನಲ್ಲಿ ಬೃಹತ್ ಪ್ರತಿಭಟನೆಗಳು ನಡೆದಿದ್ದವು. ಆಡಳಿತಾರೂಢ ಎನ್‍ಡಿಎ ಮೈತ್ರಿಕೂಟದಲ್ಲಿರುವ ಎಐಎಡಿಎಂಕೆ, ಪಿಎಂಕೆ ಹಾಗೂ ತಮಿಳುನಾಡಿನ ಪ್ರಮುಖ ವಿರೋಧ ಪಕ್ಷ ಡಿಎಂಕೆ, ಕರಡು ಪ್ರತಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದವು. ಅತ್ತ, ಮಹಾರಾಷ್ಟ್ರ ನವ ನಿರ್ಮಾಣ ಸೇನೆಯ (ಎಂಎನ್‍ಎಸ್) ನಾಯಕ ಅನಿಲ್ ಶಿದೋರೆ ಅವರೂ ಕೇಂದ್ರದ ನಡೆಗೆ ವಿರುದ್ಧ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದರಲ್ಲದೆ, ‘ಹಿಂದಿ ನಮ್ಮ ರಾಷ್ಟ್ರ ಭಾಷೆಯಲ್ಲ. ಹಾಗಾಗಿ, ನಮ್ಮ ಮೇಲೆ ಹಿಂದಿ ಹೇರುವ ಪ್ರಯತ್ನಗಳು ಸಲ್ಲದು’ ಎಂದಿದ್ದರು.
ಸ್ಪಷ್ಟನೆ ಹೊರತಾಗಿಯೂ ತಿದ್ದುಪಡಿ: ಹೊಸ ಶಿಕ್ಷಣ ನೀತಿಯ ವಿರುದ್ಧ ವಿರೋಧ ಭುಗಿಲೇಳುತ್ತಲೇ ಸ್ಪಷ್ಟನೆ ನೀಡಿದ್ದ ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಸಚಿವ ಪ್ರಕಾಶ್ ಜಾವಡೇಕರ್, ”ಇದು ತಜ್ಞರ ಸಮಿತಿಯು ತಯಾರಿಸಿರುವ ಕರಡು ಪ್ರತಿಯಾಗಿದ್ದು, ಸಾರ್ವಜನಿಕರ ಅಭಿಪ್ರಾಯಗಳನ್ನು ಪಡೆದು ಸೂಕ್ತ ತಿದ್ದುಪಡಿ ಮಾಡಿದ ನಂತರವಷ್ಟೇ ಕೇಂದ್ರಕ್ಕೆ ಸಲ್ಲಿಸುತ್ತೇವೆ. ಯಾವುದೇ ಭಾಷೆಯನ್ನು ಯಾರ ಮೇಲೂ ಬಲವಂತವಾಗಿ ಹೇರುವ ಇರಾದೆ ಸರ್ಕಾರಕ್ಕಿಲ್ಲ” ಎಂದು ಸ್ಪಷ್ಟಪಡಿಸಿದ್ದರು. ಸಚಿವರ ಸ್ಪಷ್ಟನೆಯ ಹೊರತಾಗಿಯೂ, ತನ್ನ ಕರಡಿನಲ್ಲಿ ತಿದ್ದುಪಡಿ ತರುವ ಮೂಲಕ ಅಸಮಾಧಾನವನ್ನು ತಗ್ಗಿಸಲು ಕೇಂದ್ರ ಪ್ರಯತ್ನಿಸಿದೆ.