ಕೂಳೂರು: ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕೂಳೂರಿನ ಹಳೆಯ ಕಮಾನು ಸೇತುವೆ ಸಂಚಾರಕ್ಕೆ ಯೋಗ್ಯವಾಗಿಲ್ಲ. ತಜ್ಞರ ವರದಿಯ ಆಧಾರದಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲು ಮಂಗಳವಾರ ಆದೇಶ ನೀಡಿದ್ದಾರೆ.
ಹೊಸ ಸೇತುವೆ ನಿರ್ಮಾಣ ಶೀಘ್ರ ಆರಂಭವಾಗಲಿದೆ. ಅದು ಪೂರ್ಣವಾಗುವರೆಗೂ ತಾತ್ಕಾಲಿಕವಾಗಿ ಹಳೆ ಸೇತುವೆಯಲ್ಲಿ ಘನ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಪರ್ಯಾಯ ಮಾರ್ಗ ಮತ್ತು ವ್ಯವಸ್ಥೆಗಳ ಹಿನ್ನೆಲೆಯಲ್ಲಿ ವಾರದೊಳಗೆ ವಾಹನ ಸಂಚಾರ ಸ್ಥಗಿತ ಆದೇಶ ಪಾಲಿಸುವಂತೆ ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಉಡುಪಿಯಿಂದ ಬೆಂಗಳೂರು ಕಡೆಗೆ ಹೋಗುವ ಮತ್ತು ಬರುವ ಬುಲೆಟ್ ಟ್ಯಾಂಕರುಗಳು, ಪಡುಬಿದ್ರೆ ಕಾರ್ಕಳ, ಗುರುವಾಯನಕೆರೆ, ಧರ್ಮಸ್ಥಳ, ಕೊಕ್ಕಡ, ಪೆರಿಯಶಾಂತಿ, ಮೂಲಕ ಸಂಚರಿಸಬೇಕಿದೆ. ಕೇರಳದಿಂದ ಉಡುಪಿಗೆ ಬರುವ ಕೆಪಿಟಿ ಯಿಂದ ಕಾವೂರು, ಬಜ್ಪೆ, ಸುರತ್ಕಲ್ ಮೂಲಕ ಸಂಚರಿಸಬೇಕು.
ಉಡುಪಿ ಭಾಗದಿಂದ ಮಂಗಳೂರು ಕಡೆಗೆ ಹಳೆ ಸೇತುವೆಯಲ್ಲಿ ಲಾರಿಗಳಿಗೆ ಪ್ರವೇಶವಿಲ್ಲ. ಕೂಳೂರು ಹೊಸ ಸೇತುವೆಯಲ್ಲಿ ಸಂಚಾರಕ್ಕೆ ಅವಕಾಶ ನೀಡಲಾಗುತ್ತದೆ.
ಹಳೆ ಸೇತುವೆಯಲ್ಲಿ ಲಘು ವಾಹನಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ಕಾರು, ಜೀಪು, ಟೆಂಪೋ, ಆಟೋರಿಕ್ಷಾ ಮತ್ತು ದ್ವಿಚಕ್ರ ವಾಹನಗಳಿಗೆ ಕಮಾನು ಸೇತುವೆ ಮೂಲಕ ಸಂಚರಿಸಲು ಅವಕಾಶ ನೀಡಲಾಗಿದೆ. ಇತರ ವಾಹನಗಳಿಗೆ ಸಮೀಪದ ಮತ್ತೊಂದು ಸೇತುವೆಯಲ್ಲಿ ಸಂಚಾರಕ್ಕೆ ಅವಕಾಶ ಕಲ್ಪಿಸುವುದರಿಂದ, ಈ ಭಾಗದಲ್ಲಿ ಸಂಚಾರ ಸಮಸ್ಯೆ ಎದುರಾಗುವ ಸಾಧ್ಯತೆ ಅಧಿಕವಾಗಿದೆ.