ಶಿವಮೊಗ್ಗ: ಮಹಾತ್ಮ ಗಾಂಧಿಯನ್ನು ನಾಥೋರಾಮ್ ಗೋಡ್ಸೆ ಹತ್ಯೆ ಮಾಡಿದ್ದು ಅಕ್ಷಮ್ಯ ಎಂದು ಅಭಿಪ್ರಾಯಪಟ್ಟಿರುವ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ಅಂದಿನ ಪರಿಸ್ಥಿತಿಯಲ್ಲಿ ನಾನೇ ಇದ್ದಿದ್ದರೂ ಅವರನ್ನು ಹತ್ಯೆ ಮಾಡುವುದು ಅನಿವಾರ್ಯವಾಗುತ್ತಿತ್ತು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ನಗರದ ಕರ್ನಾಟಕ ಸಂಘದಲ್ಲಿ ನಡೆಯುತ್ತಿರುವ ವಿಪ್ರ ನೌಕರರ ಕ್ಷೇಮಾಭಿವೃದ್ಧಿ ಸಂಘ ಆಯೋಜನೆಯ ರಾಮಾಯಣ ಸಮೀಕ್ಷೆ ಉಪನ್ಯಾಸ ಸಪ್ತಾಹದಲ್ಲಿ ಬುಧವಾರ ಪಾಲ್ಗೊಂಡಿದ್ದ ಅವರು, ಗಾಂಧೀಜಿಯವರ ಸತ್ಯ, ಶಾಂತಿ, ಸರಳತೆ, ಅಹಿಂಸೆ ಎಲ್ಲವನ್ನೂ ನಾನೂ ಒಪ್ಪುತ್ತೇನೆ. ಆದರೆ, ಅವರ ಚಿಂತನೆಗಳು ಹಿಂದೂಗಳ ಹಿತ ಕಾಯುವಲ್ಲಿ ಸಂಪೂರ್ಣ ವಿಫಲವಾಗಿತ್ತು. ಅಂತಹ ಮಹಾತ್ಮರನ್ನು ಗೋಡ್ಸೆ ಹತ್ಯೆ ಮಾಡಿದ್ದು ಕೂಡ ಅಕ್ಷಮ್ಯವಾಗಿದ್ದು ಒಪ್ಪುವಂತಹ ವಿಷಯವಲ್ಲ. ಆದರೆ ಮಹಾತ್ಮ ಗಾಂಧಿ ಕಾಲದಲ್ಲಿ ಇದ್ದಿದ್ದರೆ ಅವರಿಗೆ ನಾನೇ ಗುಂಡು ಹಾರಿಸುತ್ತಿದ್ದೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದರು.
ಅಂದು ಗಾಂಧೀಜಿ ಎಡಬಲದಲ್ಲಿ ಜವಾಹರಲಾಲ್ ನೆಹರು ಹಾಗೂ ಸರ್ದಾರ್ ವಲ್ಲಭಭಾಯಿ ಪಟೇಲ್ ಇದ್ದರು. ಆದರೆ, ಸ್ತ್ರೀಲೋಲ ನೆಹರು ಅವರನ್ನು ಗಾಂಧಿ ಮುನ್ನೆಲೆಗೆ ತಂದಿದ್ದು ಸರಿಯಲ್ಲ. ಇಂತಹ ಹಲವಾರು ಅಸಮ್ಮತ ಸಂಗತಿಗಳು ಗಾಂಧಿಯವರದ್ದಾಗಿದೆ ಎಂದರು.
ಸಾಧ್ವಿ ಪ್ರಜ್ಞಾ ಸಿಂಗ್ ಅವರು ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಬಾರದಿತ್ತು ಎಂದು ಕೆಲವರು ಹೇಳುತ್ತಾರೆ. ಆದರೆ, ಅವರು ಗೆಲುವು ಸಾಧಿಸಿದ್ದು ಒಳ್ಳೆಯ ಬೆಳವಣಿಗೆ. ಅವರು ಗೋಡ್ಸೆಯನ್ನು ದೇಶಭಕ್ತ ಎಂದು ಸಂಬೋಧಿಸಿದ್ದರಿಂದ ವಿವಾದವಾಯಿತಷ್ಟೇ ಎಂದರು. ಇಂದಿಗೆ ರಾವಣ ವ್ಯವಸ್ಥೆ ಇದೆ. ರಾಮನಂತಹ ಒಬ್ಬ ಮೋದಿ ಏನು ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ ಎಂದರು.