ಪಟ್ಟಣ ಪ್ರದೇಶಗಳಲ್ಲಿ ಉಪಯೋಗಿಸಿ ವಿಸರ್ಜನೆಯಾಗುತ್ತಿರುವ ನೀರು ನದಿಗಳು ಹಾಗು ಕೆರೆಗಳನ್ನು ಸೇರುತ್ತಿರುವುದರಿಂದ ರಾಜ್ಯದ ಬಹುತೇಕ ನದಿಗಳ ಹಾಗೂ ಕೆರೆಗಳ ನೀರು ಅಪಾಯಕಾರಿ ಬ್ಯಾಕ್ಟೀರಿಯಾಗಳ ಹೆಚ್ಚಳದಿಂದಾಗಿ ಬಳಸುವುದಕ್ಕೆ ಸಾಧ್ಯವಾಗದ (ಸಿ ಮತ್ತು ಇ ವರ್ಗ) ಸ್ಥಿತಿಗೆ ತಲುಪಿದೆ ಎಂದು ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಸಿ.ಜಯರಾಂ ಕಳವಳ ವ್ಯಕ್ತಪಡಿಸಿದ್ದಾರೆ.
ಅರಣ್ಯ, ಜೀವ ಪರಿಸ್ಥಿತಿ ಮತ್ತು ಪರಿಸರ ಇಲಾಖೆಯಿಂದ ನಗರದ ಚೌಡಯ್ಯ ಸ್ಮಾರಕ ಭವನದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಹಾಗೂ ರಾಜ್ಯ ಪರಿಸರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ನದಿಗಳಲ್ಲಿ ಮಾಲಿನ್ಯ ಮಾಪನಕ್ಕೆ ಸಂಬಂಧಿಸಿದಂತೆ ಅಳವಡಿಸಿರುವ ಗುಣಮಟ್ಟಮಾಪನ (ರಿಯಲ್ ಟೈಮ್ ವಾಟರ್ ಕ್ವಾಲಿಟಿ ಮಾನಿಟರಿಂಗ್) ವ್ಯವಸ್ಥೆಯಿಂದ ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ನದಿ ಮತ್ತು ಕೆರೆಗೆ ಸೇರುವ ನೀರಿನ ಮಾಲಿನ್ಯ ಮಾಪನ ಮಾಡಲು ರಾಜ್ಯದ 98 ಕೇಂದ್ರಗಳಲ್ಲಿ ನದಿ ನೀರಿನ ಮಾಲಿನ್ಯ ಮಾಪನ ಅಳವಡಿಸಲಾಗುತ್ತಿದೆ ಎಂದರು.
ರಾಜ್ಯದ ಪ್ರಮುಖ ನಗರಗಳಲ್ಲಿ ವಾಯುಮಾಲಿನ್ಯ ಗುಣಮಟ್ಟ ತಿಳಿಯಲು ಬೆಂಗಳೂರಿನಲ್ಲಿ ಏಳು ನಿರಂತರ ವಾಯು ಮಾಪನ ಕೇಂದ್ರ, 14 ಮಾನವ ಚಾಲಿತ ವಾಯು ಮಾಪನ ಕೇಂದ್ರ, ಜಿಲ್ಲೆಗಳಲ್ಲಿ ತಲಾ 22 ನಿರಂತರ ವಾಯು ಮಾಪನ ಕೇಂದ್ರ ಮತ್ತು ಮಾನವ ಚಾಲಿತ ಮಾಪನ ಕೇಂದ್ರ ಸ್ಥಾಪಿಸಲಾಗಿದೆ.
ಇದರ ಪರಿಹಾರಕ್ಕಾಗಿ ವಾಯುಮಾಲಿನ್ಯ ನಿಯಂತ್ರಿಸಲು ಸಮಿತಿ ರಚನೆ ಮಾಡಲಾಗಿದೆ. ಬೆಂಗಳೂರು, ದಾವಣಗೆರೆ, ಹುಬ್ಬಳ್ಳಿ-ಧಾರವಾಡ ಹಾಗೂ ಕಲಬುರಗಿ ನಗರಗಳಲ್ಲಿ ಮಿತಿ ಮೀರಿರುವ ವಾಯು ಮಾಲಿನ್ಯ ನಿಯಂತ್ರಿಸಲು ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಕಾರ್ಯಪಡೆ, ಪರಿಸರ ಹಾಗೂ ಜೀವಶಾಸ್ತ್ರ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ವಾಯು ಗುಣಮಟ್ಟಮಾಪನ ಸಮಿತಿ ಹಾಗೂ ಸದಸ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸಮನ್ವಯ ಸಮಿತಿ ರಚನೆ ಮಾಡಲಾಗಿದೆ. ಈ ಮೂರು ಸಮಿತಿಗಳು ಬೆಂಗಳೂರಿನಲ್ಲಿ ವಾಯು ಮಾಲಿನ್ಯ ನಿಯಂತ್ರಿಸಲು 44 ಅಂಶಗಳ ಅಲ್ಪಾವಧಿ ಮತ್ತು ದೀರ್ಘಾವಧಿ ಕಾರ್ಯಯೋಜನೆ ಅನುಷ್ಠಾನಕ್ಕೆ ಇಲಾಖೆಗೆ ಸೂಚಿಸಿವೆ ಎಂದು ಜಯರಾಂ ವಿವರಿಸಿದರು.