ತಿರುವನಂತಪುರಂ: ಅಮೇಥಿಯಲ್ಲಿ ಸೋತರೂ, ತನ್ನನ್ನು ಅಭೂತಪೂರ್ವ ಮತಗಳ ಅಂತರದಿಂದ ಗೆಲ್ಲಿಸಿದ್ದ ವಯನಾಡು ಜನತೆಗೆ ಧನ್ಯವಾದ ಸಲ್ಲಿಸುವ ಸಲುವಾಗಿ, ಮೂರು ದಿನಗಳ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಪ್ರವಾಸ, ಹಲವು ಭಾವನಾತ್ಮಕ ಸನ್ನಿವೇಶಗಳಿಗೆ ಸಾಕ್ಷಿಯಾಗಿದೆ.
ಮೂರು ದಿನಗಳ ಭೇಟಿಯ ಕೊನೆಯ ದಿನವಾದ ಭಾನುವಾರ ರಾಹುಲ್, ವಯನಾಡು ನಲ್ಲಿ ನರ್ಸ್ ರಾಜಮ್ಮ ವವಾತಿಲ್ ಅವರನ್ನು ಭೇಟಿಯಾಗಿದ್ದಾರೆ. ರಾಹುಲ್ ಇಲ್ಲಿಗೆ ಬಂದಾಗ ಅವರನ್ನು ಭೇಟಿಯಾಗುವ ಇಂಗಿತವನ್ನು ರಾಜಮ್ಮ ವ್ಯಕ್ತಪಡಿಸಿದ್ದರು.
ಜೂನ್ 19, 1970ರಂದು ರಾಹುಲ್ ಗಾಂಧಿ ಜನಿಸಿದ ದಿನ. ಆ ವೇಳೆ, ರಾಜಮ್ಮ ದೆಹಲಿಯ ಹೋಲಿ ಫ್ಯಾಮಿಲಿ ಆಸ್ಪತ್ರೆಯಲ್ಲಿ ಶುಶ್ರೂಕಿಯಾಗಿ ಕೆಲಸ ನಿರ್ವಹಿಸುತ್ತಿದ್ದರು. ರಾಜೀವ್ ಗಾಂಧಿ – ಸೋನಿಯಾ ಗಾಂಧಿ ದಂಪತಿಗಳ ಗಂಡು ಮಗುವಿನ ಜನನಕ್ಕೆ (ರಾಹುಲ್) ರಾಜಮ್ಮ ಸಾಕ್ಷಿಯಾಗಿದ್ದರು.
1987ರಲ್ಲಿ ಸೇವೆಯಿಂದ ಸ್ವಯಂ ನಿವೃತ್ತಿ ಪಡೆದಿದ್ದ ರಾಜಮ್ಮ, ಕೇರಳದ ಸುಲ್ತಾನ್ ಬತ್ತೇರಿ ಬಳಿಯ ಕಲ್ಲೂರಿನಲ್ಲಿ ನೆಲೆಸಿದ್ದರು. ರಾಹುಲ್ ಭೇಟಿಯಾಗುವ ಆಸೆಯನ್ನು ಕಾಂಗ್ರೆಸ್ ಮುಖಂಡರಲ್ಲಿ ರಾಜಮ್ಮ ತೋಡಿಕೊಂಡಿದ್ದರು. ಅದಕ್ಕೆ ಸಮಯ ಈಗ ಕೂಡಿ ಬಂದಿದೆ.
ಇದೇ ಮೇ ತಿಂಗಳಲ್ಲಿ, ಅದರಲ್ಲೂ ಲೋಕಸಭಾ ಚುನಾವಣೆಯ ಪ್ರಚಾರದ ಭರಾಟೆ ಜೋರಾಗಿದ್ದಾಗ, ರಾಹುಲ್ ಗಾಂಧಿಯ ಪೌರತ್ವದ ವಿಚಾರ ಭಾರೀ ಚರ್ಚೆಯ ವಿಷಯವಾಗಿತ್ತು. ಆ ವೇಳೆ, ರಾಜಮ್ಮ, ಈ ವಿಚಾರದಲ್ಲಿ ಯಾರೂ ಶಂಕೆ ವ್ಯಕ್ತಪಡಿಸಬಾರದು. ಯಾಕೆಂದರೆ, ಅವರ ಜನನಕ್ಕೆ ನಾನೂ ಸಾಕ್ಷಿಯಾಗಿದ್ದೆ ಎಂದು ಹೇಳಿದ್ದರು. ರಾಹುಲ್ ಗಾಂಧಿ ನರ್ಸ್ ರಾಜಮ್ಮನನ್ನು ಭೇಟಿಯಾಗಿರುವುದು, ಸಾಮಾಜಿಕ ತಾಣದಲ್ಲಿ ವ್ಯಾಪಕ ಪ್ರಶಂಸೆಗೊಳಗಾಗಿದೆ.