ಸೇನೆ ಸಿಬ್ಬಂದಿಗೆ ನಿವೃತ್ತಿ ವಯೋಮಿತಿ ನಿಗದಿ ಕುರಿತ ನಿರ್ಧಾರ ಕೈಗೊಳ್ಳುವಲ್ಲಿ ವಿಳಂಬವಾದ್ದರಿಂದ ಮೇ 31ರಿಂದಲೂ ಕೇಂದ್ರೀಯ ಸಶಸ್ತ್ರ ಪಡೆಗಳ ನಿವೃತ್ತಿ ಅಂಚಿನಲ್ಲಿರುವ ನೂರಾರು ಸಿಬ್ಬಂದಿಯ ಪಿಂಚಣಿ ಮತ್ತು ನಿವೃತ್ತಿ ಪ್ರಕ್ರಿಯೆ ನೆನೆಗುದಿಗೆ ಬಿದ್ದಿದೆ.
ಸದ್ಯ ಸಿಐಎಸ್‍ಎಫ್ ಮತ್ತು ಅಸ್ಸಾಂ ರೈಫಲ್ಸ್ ನ ಸಿಬ್ಬಂದಿ 60 ವರ್ಷಕ್ಕೆ ನಿವೃತ್ತರಾದರೆ, ಸಿಆರ್‍ಪಿಎಫ್, ಬಿಎಸ್‍ಎಫ್, ಐಟಿಬಿಪಿ ಮತ್ತು ಎಸ್‍ಎಸ್‍ಬಿ ಸಿಬ್ಬಂದಿ 57 ವರ್ಷಕ್ಕೆ ನಿವೃತ್ತರಾಗುತ್ತಾರೆ. ಆದರೆ ಜನವರಿಯಲ್ಲಿ ದಿಲ್ಲಿ ಹೈಕೋರ್ಟ್, ಸಶಸ್ತ್ರ ಪಡೆಗಳ ವಿವಿಧ ವಿಭಾಗಗಳಲ್ಲಿ ವಿವಿಧ ರೀತಿಯ ನಿವೃತ್ತಿಯ ವಯಸ್ಸು ನಿಗದಿಸಿರುವುದು ಅಸಮಾನತೆಯನ್ನು ಸೃಷ್ಟಿಸಿದಂತಾಗಿದೆ.
ಇದು ಸರಿಯಾದ್ದಲ್ಲ. ಹೀಗಾಗಿ ಒಂದೇ ನಿವೃತ್ತಿ ವಯಸ್ಸನ್ನು ನಿಗದಿಸಬೇಕು ಎಂದು ಆದೇಶಿಸಿದೆ. ಆದರೆ ಕೇಂದ್ರ ಸರಕಾರ ಈ ಸಂಬಂಧ ಯಾವುದೇ ನಿರ್ಧಾರವನ್ನು ಇನ್ನೂ ಪ್ರಕಟ ಪಡಿಸಿಲ್ಲ.
ಹೀಗಾಗಿ ಕೇಂದ್ರ ಸರಕಾರ ಈ ಸಂಬಂಧ ಅಂತಿಮ ಆದೇಶ ಹೊರಡಿಸುವವರೆಗೂ ನಿರೀಕ್ಷಿಸುವಂತೆ ಸಶಸ್ತ್ರ ಪಡೆಯ ಉನ್ನತ ಅಧಿಕಾರಿಗಳು ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಕೆಲವು ಪಡೆಗಳ ಯೋಧರಿಗೆ ನಿರ್ಧಾರ ಪ್ರಕಟವಾಗುವವರೆಗೂ ಮನೆಯಲ್ಲೇ ಇರುವಂತೆ ಸೂಚಿಸಲಾಗಿದ್ದರೆ, ಇನ್ನೂ ಕೆಲವರಿಗೆ ಕಚೇರಿಗೆ ಆಗಮಿಸುವಂತೆ ಸೂಚಿಸಲಾಗಿದೆ.