ಬೆಂಗಳೂರು: ಕೇರಳಕ್ಕೆ ಪ್ರವೇಶಿಸಿರುವ ಮುಂಗಾರು ಮಳೆ ಆರಂಭದಲ್ಲೇ ಆರ್ಭಟ ತೋರಿದೆ. ಕೊಚ್ಚಿಗೆ ಅಪ್ಪಳಿಸಿರುವ ಮುಂಗಾರು ಮಳೆ ಕೋಜಿಕ್ಕೋಡ್‍ನಲ್ಲಿ ಆತಂಕ ಸೃಷ್ಟಿಸಿದೆ. ಮುನ್ನೆಚ್ಚರಿಕಾ ಕ್ರಮವಾಗಿ 9 ಜಿಲ್ಲೆಗಳಲ್ಲಿ ಕಟ್ಟೆಚ್ಚರ ಹೊರಡಿಸಲಾಗಿದೆ. ಕರ್ನಾಟಕಕ್ಕೂ ಮುಂಗಾರು ಪ್ರವೇಶವಾಗುತ್ತಿದ್ದು, ಹಿತವಾದ ಹವಾಮಾನ ಇದೆ.
ಮಾನ್ಸೂನ್ ಜೊತೆಗೆ ಚಂಡಮಾರುತದ ಭೀತಿಯೂ ಎದ್ದಿದೆ. ಅರಬ್ಬಿ ಸಮುದ್ರದ ಆಗ್ನೇಯ ಭಾಗದ ಲಕ್ಷದ್ವೀಪದ ಬಳಿ ವಾಯುಭಾರ ಕುಸಿತ ಉಂಟಾಗಿದ್ದು, ಕೇರಳ ಮತ್ತು ಕರ್ನಾಟಕದ ಹಲವೆಡೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಲಕ್ಷದ್ವೀಪಕ್ಕೆ ಹೊಂದಿಕೊಂಡಂತೆ ಅರಬ್ಬಿ ಸಮುದ್ರದ ಆಗ್ನೇಯ ಭಾಗ ಮತ್ತು ಮಧ್ಯ ಪೂರ್ವ ಭಾಗದಲ್ಲಿ ವಾಯುಭಾರ ಕುಸಿತದ ಕೇಂದ್ರವಿದೆ. ಮುಂದಿನ 24 ಗಂಟೆಗಳಲ್ಲಿ ಅದು ಚಂಡಮಾರುತವಾಗಿ ಪರಿವರ್ತನೆಯಾಗುವ ಸಾಧ್ಯತೆಯೂ ಇದೆ. ಪ್ರತಿ ಗಂಟೆಗೆ 45ರಿಂದ 55 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದ್ದು, ಮುಂದಿನ ಎರಡು ದಿನಗಳಲ್ಲಿ ಗಾಳಿಯ ವೇಗ 90ರಿಂದ 110 ಕಿ.ಮೀವರೆಗೂ ತಲುಪಬಹುದು.
ಕರಾವಳಿಯಲ್ಲಿ 5 ದಿನಗಳ ಕಾಲ ಮತ್ತು ದಕ್ಷಿಣ ಒಳನಾಡಿನಲ್ಲಿ 2 ದಿನಗಳ ಕಾಲ ಭಾರಿ ಮಳೆ ಬೀಳುವ ಸಂಭವವಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಆದ್ದರಿಂದಾಗಿ ಗುರುವಾರದವರೆಗೂ ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಮುನ್ನೆಚ್ಚರಿಕೆ ನೀಡಲಾಗಿದೆ.
ಎಲ್ಲೆಲ್ಲಿ ಮಳೆ ಸಾಧ್ಯತೆ?
* ಜೂನ್ 10,11,12 – ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ
* ಜೂನ್ 13ರವರೆಗೆ – ಬೆಂಗಳೂರು, ಮೈಸೂರು, ಹಾಸನ ಸೇರಿ ದಕ್ಷಿಣ ಒಳನಾಡು
* ಜೂನ್ 10,11 – ಧಾರವಾಡ, ಗದಗ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ