ತುಳು ಚಿತ್ರರಂಗವು ಬೆಳೆಯುತ್ತಿರುವ ಭಾರತೀಯ ಚಿತ್ರರಂಗಗಳ ಪೈಕಿ ಮುಂಚೂಣಿಯ ಸ್ಥಾನದಲ್ಲಿದೆ. ಕಳೆದ ಒಂದು ದಶಕದಲ್ಲಿ ತುಳು ಚಿತ್ರರಂಗ ತನ್ನ ಬೆಳವಣಿಗೆಯ ವೇಗವನ್ನು ಹೆಚ್ಚಿಸಿಕೊಂಡಿತ್ತು.
ಆದರೆ ತುಳು ಭಾಷಿಕರು ಹೆಚ್ಚಾಗಿ ಕರ್ನಾಟಕದ 2 ಜಿಲ್ಲೆಗೆ ಮಾತ್ರ ಸೀಮಿತವಾಗಿರುವುದು ಹಾಗು ಚಿತ್ರಮಂದಿರಗಳ ಸಂಖ್ಯೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿರುವುದರಿಂದ ಚಿತ್ರರಂಗದ ಮಾರುಕಟ್ಟೆಯ ಬೆಳವಣಿಗೆ ಸಾಧ್ಯವಾಗಿರಲಿಲ್ಲ. ಆದರಿದೀಗ ತುಳು ಚಿತ್ರ ನಿರ್ಮಾಪಕ, ಯಶಸ್ವಿ 75 ದಿನಗಳನ್ನು ಪೂರೈಸಿ ಶತದಿನದತ್ತ ಮುನ್ನುಗುತ್ತಿರುವ ಈ ವರ್ಷದ ಪ್ರಥಮ ಸೂಪರ್ ಹಿಟ್ ಸಿನೆಮಾ ‘ಕಟಪಾಡಿ ಕಟ್ಟಪ್ಪ’ದ ನಿಮಾಪಕ ರಾಜೇಶ್ ಬ್ರಹ್ಮಾವರ್ ಇದೀಗ ಹೊಸ ಸಾಹಸವೊಂದಕ್ಕೆ ಕೈ ಹಾಕಿದ್ದಾರೆ.
ಈ ಹಿಂದೆ ತುಳುನಾಡಿನಲ್ಲಿ ಬರೋಬ್ಬರಿ 30 ಚಿತ್ರಮಂದಿರಗಳು ಇತ್ತು ಎಂದು ಇತಿಹಾಸ ಹೇಳುತ್ತದೆ. ಆದರೆ ಕಾಲಕ್ರಮೇಣ ಉಳಿದಿರುವುದು ಕೇವಲ 8ರಿಂದ 10 ಚಿತ್ರಮಂದಿರಗಳಷ್ಟೆ. ಈ ಇತಿಹಾಸವನ್ನು ಮರುಸೃಷ್ಟಿಸುವ ಮಹತ್ತರವಾದ ಕಾರ್ಯಕ್ಕೆ ಅಣಿಯಾಗಿದ್ದಾರೆ ರಾಜೇಶ್ ಬ್ರಹ್ಮಾವರ್.
ಹೆಬ್ರಿ, ಕಿನ್ನಿಗೋಳಿ, ಪಡುಬಿದ್ರೆ, ಹಿರಿಯಡ್ಕ, ಮುಡಿಪು, ಬಜ್ಪೆ, ಉಪ್ಪಿನಂಗಡಿ, ನೆಲ್ಯಾಡಿ, ವಿಟ್ಲ ಮತ್ತು ಮೆಲ್ಕಾರ್ ನಲ್ಲಿ ಸರಿಸುಮಾರು 70ರಿಂದ 80 ಜನ ಕುಳಿತುಕೊಳ್ಳುವ ಆಸನದ ಎ/ಸಿ ಅಳವಡಿಕೆಯ ಸುಸಜ್ಜಿತ 10 ಥಿಯೇಟರ್‍ಗಳು ‘ಬ್ರಹ್ಮಾವರ್ ಸಿನೆಮಾಸ್’ ಹೆಸರಿನಲ್ಲಿ ಅತೀ ಶೀಘ್ರದಲ್ಲಿ ಉದ್ಘಾಟನೆಗೊಳ್ಳಲಿದೆ.
ಬೇರೆ ಭಾಷೆಯ ಸಿನೆಮಾಗಳಿಗೆ ‘ಬ್ರಹ್ಮಾವರ್ ಸಿನೆಮಾಸ್’ನಲ್ಲಿ ಅವಕಾಶವಿದ್ದರೂ ತುಳು ಚಿತ್ರಗಳಿಗೆ ಮೊದಲ ಪ್ರಾಧನ್ಯತೆ ಮತ್ತು ‘ಬ್ರಹ್ಮಾವರ್ ಸಿನೆಮಾಸ್’ ಮಾಡಿರುವ ಉದ್ದೇಶ ತುಳು ಚಿತ್ರಗಳು ಬೆಳೆಯುವ ದೃಷ್ಟಿಯಿಂದ ಎಂದು ರಾಜೇಶ್ ಬ್ರಹ್ಮಾವರ್ ಕಹಳೆ ನ್ಯೂಸ್‍ಗೆ ತಿಳಿಸಿದ್ದಾರೆ.
ಭಾರವಿ ಫಿಲ್ಮ್ ಬ್ಯೂರೋ, ಕಹಳೆ ನ್ಯೂಸ್