ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಸರಕಾರ ಸ್ವಚ್ಛಮೇವ ಜಯತೇ ಆಂದೋಲನವನ್ನು ಜೂ.11ರಿಂದ ಪ್ರಾರಂಭಿಸಲಿದ್ದು, ಇದರಲ್ಲಿ ಗಿಡಗಳನ್ನು ಬೆಳೆಸುವ ಯೋಜನೆಯೂ ಇರುವುದರಿಂದ ಪುತ್ತೂರಿನ ಗ್ರಾ.ಪಂ.ಗಳು ಸಾಮಾಜಿಕ ಅರಣ್ಯ ಇಲಾಖೆಯಿಂದ 10 ಸಾವಿರಕ್ಕೂ ಅಧಿಕ ಗಿಡಗಳಿಗೆ ಬೇಡಿಕೆ ವ್ಯಕ್ತಪಡಿಸಿದೆ.
ಸೋಮವಾರವೇ ಜಿಲ್ಲೆಗೆ ಮುಂಗಾರು ಪ್ರವೇಶದ ಲಕ್ಷಣಗಳು ಕಂಡುಬರುತ್ತಿರುವುದರಿಂದ ಗಿಡಗಳನ್ನು ನೆಡುವುದಕ್ಕೆ ಇದು ಸೂಕ್ತ ಸಮಯ ಎನಿಸಿದೆ. ಪ್ರತಿ ಗ್ರಾ.ಪಂ.ಗಳು ಪುತ್ತೂರಿನ ಸಾಮಾಜಿಕ ಅರಣ್ಯ ಇಲಾಖೆಗೆ ಇಮೇಲ್ ಮೂಲಕ 500, 200, 100 ಗಿಡಗಳಿಗೆ ಬೇಡಿಕೆ ಸಲ್ಲಿಸಿವೆ. ಸೋಮವಾರವೇ ಸಾಕಷ್ಟು ಗ್ರಾ.ಪಂ.ಗಳು ಇಲಾಖೆಗೆ ಆಗಮಿಸಿ ತಮ್ಮ ಬೇಡಿಕೆಯಂತೆ ಗಿಡಗಳನ್ನು ಸಾಗಾಟ ನಡೆಸಿವೆ.
ಇಲಾಖೆಯ ವತಿಯಿಂದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಫಲಾನುಭವಿಗಳಿಗೆ ಅರಣ್ಯ ಗಿಡ ನಾಟಿ ಮಾಡಲು ಸುಮಾರು 22,900 ವಿವಿಧ ಜಾತಿಯ ಗಿಡಗಳನ್ನು ಮುಕ್ವೆಯಲ್ಲಿರುವ ಇಲಾಖಾ ನರ್ಸರಿಯಲ್ಲಿ ಬೆಳೆಸಲಾಗಿದ್ದು, ಇದಕ್ಕೆ ವಿಶೇಷ ಪ್ರೋತ್ಸಾಹ ಧನವೂ ಲಭ್ಯವಾಗಲಿದೆ.
ವಿವಿಧ ಜಾತಿಯ ಗಿಡಗಳು ಇಲಾಖೆಯ ನರ್ಸರಿಯಲ್ಲಿ ಸಾಗುವಾನಿ, ಹಲಸು, ಹೆಬ್ಬಲಸು, ಮಾವು, ಪುನರ್ ಪುಳಿ, ಮಹಾಗನಿ, ಸಂಪಿಗೆ, ಕಿರಾಲ್ ಬೋಗಿ, ಶ್ರೀಗಂಧ, ರಕ್ತಚಂದನ, ನೇರಳೆ, ಹಾಲ್‍ವುಡ್ಡಿ, ಶಿವಣೆ, ಬಿಲ್ವಪತ್ರೆ, ನೆಲ್ಲಿ, ಸೀತಾಫಲ, ಬಾದಾಮಿ, ಬೇಂಗ, ಕಾಚು, ಔಷಧಿ ಸಸಿಗಳು, ರಾಂಪತ್ರೆ ಮೊದಲಾದ ಗಿಡಗಳು ಇಲ್ಲಿ ಲಭ್ಯವಿವೆ.
ಇಲಾಖೆಯು ಆಸಕ್ತ ಫಲಾನುಭವಿಗಳಿಗೆ ಉಚಿತವಾಗಿ ಗಿಡಗಳನ್ನು ನೀಡುವುದರ ಜತೆಗೆ ಗಿಡ ನಾಟಿ ಮಾಡುವುದಕ್ಕೆ ಕೂಲಿ ಪಾವತಿ ಕೂಡ ಯೋಜನೆಯಡಿ ಗಿಡ ಒಂದಕ್ಕೆ ಕೂಲಿ ಹಾಗೂ ಸಾಮಗ್ರಿ ವೆಚ್ಚ ಸೇರಿ ಅಂದಾಜು 55 ರೂ.ನಷ್ಟು ಪಾವತಿಯಾಗುತ್ತದೆ.