Recent Posts

Sunday, September 22, 2024
ಸುದ್ದಿ

ನೋಟ್‌ಬ್ಯಾನ್‌ ಎಫೆಕ್ಟ್- ದಯಾಮರಣಕ್ಕೆ ಮೈಸೂರಿನ ಕುಟುಂಬ ಅರ್ಜಿ – ಕಹಳೆ ನ್ಯೂಸ್

ಮೈಸೂರು: ನೋಟ್ ಬ್ಯಾನ್ ಆಗಿ ವರ್ಷಗಳೇ ಕಳೆದಿವೆ. ಕೆಲವರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದರೆ ಮತ್ತೆ ಕೆಲವರು ಉದ್ಯಮದಲ್ಲಿ ನಷ್ಟ ಅನುಭವಿಸಿದ್ದಾರೆ. ಮೈಸೂರಿನ ಕುಟುಂಬವೊಂದಕ್ಕೆ ನೋಟ್ ಬ್ಯಾನ್ ಪರಿಣಾಮದಿಂದಾಗಿ ದಯಾಮರಣಕ್ಕೆ ಅರ್ಜಿ ಸಲ್ಲಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಪ್ರಧಾನಿ ಮೋದಿ ಅವರು ನವೆಂಬರ್ 8, 2016 ನೋಟ್ ಬ್ಯಾನ್ ಮಾಡಿ ಮೂರೂವರೆ ವರ್ಷಗಳೇ ಕಳೆದಿದೆ. ಆದರೂ, ನೋಟ್ ಬ್ಯಾನ್ ಎಫೆಕ್ಟ್ ಮಾತ್ರ ಬಾಧಿಸುತ್ತಲೇ ಇದೆ. ಹೀಗೆ ನೋಟ್ ಬ್ಯಾನ್ ಎಫೆಕ್ಟ್ ನಿಂದ ನೊಂದ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಮನಗುನಹಳ್ಳಿ ಗ್ರಾಮದ ಶೇಖರ್ ಮತ್ತವರ ಕುಟುಂಬ ದಯಾ ಮರಣಕ್ಕೆ ಅರ್ಜಿ ಸಲ್ಲಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು

ಪರೋಟ ವ್ಯಾಪಾರ ಮಾಡುತ್ತಿದ್ದ ಶೇಖರ್ 40 ಜನರಿಗೆ ಕೆಲಸ ನೀಡಿದ್ದರು. ವ್ಯಾಪಾರವೂ ಭರ್ಜರಿಯಾಗಿ ನಡೆದು ತಿಂಗಳಿಗೆ ಲಕ್ಷಾಂತರ ರೂಪಾಯಿ ಆದಾಯವಿತ್ತು. ಇದೇ ಖುಷಿಯಲ್ಲಿ ನಿವೇಶನ ಖರೀದಿ ಮಾಡಿದ ಶೇಖರ್, ಮೈಸೂರಿನ ದಿವಾನ್ಸ್ ಹೌಸಿಂಗ್ ಫೈನಾನ್ಸ್ ನಲ್ಲಿ ಮನೆ ಸಾಲ ಪಡೆದು ಮನೆಯೂ ಕಟ್ಟಿಕೊಂಡರು. ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ, ನೋಟ್ ಬ್ಯಾನ್ ಬಳಿಕ ಇದ್ದಕ್ಕಿದ್ದಂತೆ ವ್ಯಾಪಾರ ಕುಸಿದು ಹೋಗಿದೆ ಎಂದು ದಯಾ ಮರಣಕ್ಕೆ ಅರ್ಜಿ ಸಲ್ಲಿಸಿದ ಶೇಖರ್ ಹೇಳಿದ್ದಾರೆ.

ನೋಟ್ ಬ್ಯಾನ್ ಬಳಿಕ ವ್ಯಾಪಾರ ಕುಸಿದು, ಮನೆಗೆ ಪಡೆದ ಸಾಲ ತೀರಿಸಲು ಸಾಧ್ಯವಾಗಿಲ್ಲ. ಹೇಗೋ ಮಾಡಿ 2017ರವರಗೆ ಮನೆ ಸಾಲದ ಕಂತು ಕಟ್ಟಿದ್ದಾರೆ. ಆದರೆ ಮುಂದೆ ಕಟ್ಟಲು ಸಾಧ್ಯವಾಗಿಲ್ಲ. ಹೀಗಾಗಿ ಫೈನಾನ್ಸ್ ನವರು ಸಾಕಷ್ಟು ಬಾರಿ ನೋಟಿಸ್ ನೀಡಿದ್ದಾರೆ. ಕಡೆಗೆ ಮನೆ ಜಪ್ತಿ ಮಾಡಲು ಮುಂದಾಗಿದ್ದಾರೆ. ಹೀಗಾಗಿ ಶೇಖರ್ ಪತ್ನಿ ರಮಾದೇವಿ ಪುತ್ರಿ ಮಾನಸ ಪುತ್ರ ಪೂರ್ಣಚಂದ್ರ ಜೊತೆ ದಯಾಮರಣಕ್ಕೆ ಅರ್ಜಿ ಸಲ್ಲಿಸಿದ್ದಾರೆ. ರಾಜ್ಯಪಾಲರು, ಮುಖ್ಯಮಂತ್ರಿ, ಜಿಲ್ಲಾಧಿಕಾರಿ, ತಹಶೀಲ್ದಾರ್, ಶಾಸಕರಿಗೂ ಪತ್ರ ಬರೆದಿದ್ದಾರೆ ಎಂದು ಸ್ಥಳೀಯರಾದ ಸತ್ಯಪ್ಪ ತಿಳಿಸಿದ್ದಾರೆ.

ಮಾನಸಿಕವಾಗಿ ಸಾಕಷ್ಟು ನೊಂದಿರುವ ಶೇಖರ್ ಕುಟುಂಬದವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ಸಂಬಂಧ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಹ ದಾಖಲಾಗಿದೆ.