ಬೆಂಗಳೂರು : ಪಡಿತರ ಚೀಟಿಯಲ್ಲಿ ಹೆಸರು ಇರುವ ಪ್ರತಿಯೊಬ್ಬರೂ ಜುಲೈ 31ರೊಳಗೆ ಆಧಾರ್ ದೃಢೀಕರಣ (ಇ-ಕೆವೈಸಿ) ಮಾಡಿಸಿಕೊಳ್ಳಬೇಕು. ಇ-ಕೆವೈಸಿ ಮಾಡಿಸಿಕೊಳ್ಳದವರಿಗೆ ಆಗಸ್ಟ್ ನಿಂದ ಪಡಿತರ ನೀಡದಿರಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಆಧಾರ್ ದೃಢೀಕರಣದ ಮೂಲಕ ಚಾಲ್ತಿಯಲ್ಲಿ ಇರದ, ಕುಟುಂಬದೊಂದಿಗೆ ವಾಸವಿಲ್ಲದ ಹಾಗೂ ಮೃತರಾದ ಫಲಾನುಭವಿಗಳ ಮಾಹಿತಿಯನ್ನು ಗುರುತಿಸಿ, ಅಂತಹವರನ್ನು ದತ್ತಾಂಶದಿಂದ ತೆಗೆದುಹಾಕಿ ಪಡಿತರ ಕಡಿತ ಮಾಡಲಾಗುವುದೆಂದು ಇಲಾಖೆ ತಿಳಿಸಿದೆ. ಇ-ಕೆವೈಸಿ ದೃಢೀಕರಣ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಜುಲೈ 31ರೊಳಗೆ ಅಂತ್ಯೋದಯ, ಬಿಪಿಎಲ್ ಮತ್ತು ಎಪಿಎಲ್ ಪಡಿತರ ಚೀಟಿಯಲ್ಲಿ ಹೆಸರು ಇರುವ ಎಲ್ಲರೂ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ಇ-ಕೆವೈಸಿ ದೃಢೀಕರಣ ಮಾಡಿಸಬೇಕು.
ಉಚಿತ ನೋಂದಣಿ:
ಪಡಿತರ ಚೀಟಿದಾರರು ಇ-ಕೆವೈಸಿ ನೋಂದಣಿಗೆ ಯಾವುದೇ ಸೈಬರ್ ಕೆಫೆ, ಕಂಪ್ಯೂಟರ್ ಸೆಂಟರ್ ಗಳಿಗೆ ಹೋಗಬೇಕಿಲ್ಲ.
ಬದಲಾಗಿ ತಾವು ಪಡಿತರ ಪಡೆಯುವ ನ್ಯಾಯಬೆಲೆ ಅಂಗಡಿಗಳಲ್ಲಿಯೇ ಆಧಾರ್ ದೃಢೀಕರಣ ಮಾಡಿಸಬೇಕಾಗುತ್ತದೆ. ಪ್ರತಿಯೊಬ್ಬರೂ ಉಚಿತವಾಗಿ ನೋಂದಣಿ ಮಾಡಿಸಿಕೊಳ್ಳಬಹುದಾಗಿದೆ. ಒಂದು ವೇಳೆ ಯಾವುದೇ ನ್ಯಾಯಬೆಲೆ ಅಂಗಡಿಯ ಪಡಿತರ ವಿತರಕರು ಫಲಾನುಭವಿಗಳಿಂದ ಹಣ ಪಡೆದರೆ ಈ ಬಗ್ಗೆ ಸ್ಥಳೀಯ ಆಹಾರ ಇಲಾಖೆ ಅಧಿಕಾರಿಗಳಿಗೆ ದೂರು ನೀಡಬಹುದಾಗಿದೆ.
ಸರ್ಕಾರ ಪ್ರತಿ ಫಲಾನುಭವಿಯ ಆಧಾರ್ ದೃಢೀಕರಣಕ್ಕೆ ತಲಾ 5 ರು. ನಂತೆ ಮತ್ತು ಒಂದು ಕುಟುಂಬದಲ್ಲಿ ಎಷ್ಟೇ ಫಲಾನುಭವಿ ಇದ್ದರೂ ಅವರೆಲ್ಲರ ನೋಂದಣಿಗೆ ಗರಿಷ್ಠ 20 ರು.ಗಳಂತೆ ನ್ಯಾಯಬೆಲೆ ಅಂಗಡಿಯವರಿಗೆ ಹಣ ಪಾವತಿಸಲಿದೆ.
ಯಾಕೆ ಆಧಾರ್ ದೃಢೀಕರಣ:
ರಾಜ್ಯದಲ್ಲಿ ಅಂತ್ಯೋದಯ ಮತ್ತು ಬಿಪಿಎಲ್ ಪಡಿತರ ಚೀಟಿ ಹೊಂದಿರುವ 1.24 ಕೋಟಿ ಕುಟುಂಬಗಳಿದ್ದು, 4,16,54,587 ಫಲಾನುಭವಿಗಳು ಪಡಿತರ ಪಡೆಯುತ್ತಿದ್ದಾರೆ. ಇದರಲ್ಲಿ ಶೇ.99ರಷ್ಟುಫಲಾನುಭವಿಗಳ ಆಧಾರ್ ಪಡೆಯಲಾಗಿದೆ. ಆದರೆ, ಆಧಾರ್ ನೋಂದಣಿ ಹಾಗೂ ದೃಢೀಕರಣ ಆಗಿಲ್ಲ. ಪಡಿತರ ದತ್ತಾಂಶದಲ್ಲಿ ತಿಳಿಸಿರುವಂತೆ ಒಟ್ಟು ಫಲಾನುಭವಿಗಳ ಸಂಖ್ಯೆಯಲ್ಲಿ ಶೇ.17.07ರಷ್ಟುಫಲಾನುಭವಿಗಳ ಆಧಾರ್ ದೃಢೀಕರಣ ಮಾತ್ರ ಆಗಿದೆ. ಈ ಹಿನ್ನೆಲೆಯಲ್ಲಿ ಪಡಿತರ ಸೋರಿಕೆ ತಡೆಯಲು ಇ-ಕೆವೈಸಿ ನೋಂದಣಿ ಆರಂಭಿಸಲಾಗಿದೆ. ಜುಲೈ ಅಂತ್ಯದೊಳಗೆ ನೋಂದಣಿ ಮಾಡಿಸದಿದ್ದರೆ ಅಂತಹ ಫಲಾನುಭವಿಗಳಿಗೆ ಆಗಸ್ಟ್ ತಿಂಗಳ ಪಡಿತರ ಸಿಗುವುದಿಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಹಿರಿಯ ಅಧಿಕಾರಿಗಳು ಕನ್ನಡಪ್ರಭಕ್ಕೆ ಮಾಹಿತಿ ನೀಡಿದ್ದಾರೆ.
4 ಕೋಟಿ ಜನರಿಗೆ ಪಡಿತರ ವಿತರಣೆ
ಅಂತ್ಯೋದಯ ಕಾರ್ಡ್‍ಗಳ ಸಂಖ್ಯೆ 7,69,918 (ಫಲಾನುಭವಿಗಳು 30,16,603), ಬಿಪಿಎಲ್ ಪಡಿತರ ಚೀಟಿ 1,16,80,898 (ಫಲಾನುಭವಿಗಳು 3,86,37,984) ಇವೆ. ಹಾಗೆಯೇ ಒಬ್ಬರೇ ಸದಸ್ಯರಿರುವ 93921 ಕಾರ್ಡ್‍ಗಳು ಮತ್ತು ಒಂದಕ್ಕಿಂತ ಹೆಚ್ಚು ಸದಸ್ಯರಿರುವ 379215 ಎಪಿಎಲ್ ಕಾರ್ಡುಗಳಿದ್ದು, ರಾಜ್ಯದಲ್ಲಿ ಒಟ್ಟು 1.29 ಕೋಟಿಗೂ ಹೆಚ್ಚು ಪಡಿತರ ಕಾರ್ಡ್ ವಿತರಿಸಲಾಗಿದೆ.
ಪಡಿತರ ಫಲಾನುಭವಿಗಳು ಜುಲೈ ಅಂತ್ಯದೊಳಗೆ ಕುಟುಂಬ ಸಮೇತರಾಗಿ ಆಧಾರ್ ದೃಢೀಕರಣ (ಇ-ಕೆವೈಸಿ) ಮಾಡಿಸಿಕೊಳ್ಳಬೇಕು. ಆಗಸ್ಟ್ ತಿಂಗಳಿನಲ್ಲಿ ನೋಂದಣಿ ಮಾಡಿಸದ ಫಲಾನುಭವಿಯ ಪಡಿತರ ರದ್ದುಗೊಳಿಸಲಾಗುವುದು. ಬಯೋಮೆಟ್ರಿಕ್ ಮೂಲಕ ನೋಂದಣಿ ಮಾಡಲಾಗುವುದು. ಈಗಾಗಲೇ ಈ ಕುರಿತು ನ್ಯಾಯಬೆಲೆ ಅಂಗಡಿ ಎದುರು ಸೂಚನಾ ಫಲಕ ಪ್ರದರ್ಶಿಸಲಾಗುತ್ತಿದೆ.