ಬೆಂಗಳೂರು: ಮಹದಾಯಿ ಹೋರಾಟದ ಕಿಚ್ಚಿಗೆ ಬುಧವಾರ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳು ಬಂದ್ ಆಗಲಿವೆ. ಮಹದಾಯಿ ವಿವಾದ ಇತ್ಯರ್ಥಗೊಳಿಸಲು ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸದ ಕೇಂದ್ರ, ರಾಜ್ಯ ಸರ್ಕಾರಗಳ ನಡೆ ಖಂಡಿಸಿ ನಾಳೆ ಮಲಪ್ರಭಾ, ಮಹದಾಯಿ, ಕಳಸಾ-ಬಂಡೂರಿ ರೈತ ಹೋರಾಟ ಸಮಿತಿ ಬಂದ್‍ಗೆ ಕರೆ ನೀಡಿವೆ.
ಹುಬ್ಬಳ್ಳಿ-ಧಾರವಾಡ, ಗದಗ, ಬಾಗಲಕೋಟೆ ಹಾಗೂ ಬೆಳಗಾವಿ ಜಿಲ್ಲೆಯ ಹಲವೆಡೆ ಬಂದ್‍ಗೆ ಕರೆ ನೀಡಿರುವ ಕಾರಣ ಅರ್ಧ ಕರ್ನಾಟಕದ ಜನಜೀವನ ಸಂಪೂರ್ಣ ಸ್ಥಗಿತಗೊಳ್ಳಲಿದೆ. ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಬಂದ್ ನಡೆಯಲಿದ್ದು, ಎಲ್ಲ ಅಂಗಡಿ ಮುಂಗಟ್ಟು, ಹೋಟೆಲ್, ವಾಣಿಜ್ಯ ವಹಿವಾಟನ್ನು ಸ್ಥಗಿತಗೊಳ್ಳಲಿದೆ. ಆಟೋ ಸಂಚಾರ, ಟ್ಯಾಕ್ಸಿ ಸಂಚಾರವೂ ಸ್ತಬ್ಧಗೊಳ್ಳಲಿದೆ.
ಬಂದ್‍ಗೆ ಚಿತ್ರೋದ್ಯಮವೂ ಬೆಂಬಲ ನೀಡಿರುವ ಕಾರಣ ಉತ್ತರ ಕರ್ನಾಟಕದಲ್ಲಿ ಚಿತ್ರ ಪ್ರದರ್ಶನ ಜೊತೆಗೆ ಚಿತ್ರೋದ್ಯಮದ ಚಟುವಟಿಕೆಗಳು ನಿಲ್ಲಲಿದೆ. ಸುಮಾರು 100ಕ್ಕೂ ಹೆಚ್ಚು ಕನ್ನಡಪರ ಸಂಘಟನೆಗಳು ಬಂದ್‍ಗೆ ಬೆಂಬಲ ಘೋಷಿಸಿರುವುದರಿಂದ ಬುಧವಾರ ಕರ್ನಾಟಕ ಸ್ತಬ್ಧವಾಗುವ ಸಾಧ್ಯತೆಗಳಿವೆ. ಬಂದ್‍ಗೆ ಬೆಂಗಳೂರು ವಕೀಲರ ಸಂಘದ ಬೆಂಬಲ ನೀಡಿದ್ದು, ಹೋರಾಟದಲ್ಲಿ ಪಾಲ್ಗೊಳ್ಳಲು ತೀರ್ಮಾನಿಸಿದೆ.
ಎಲ್ಲೆಲ್ಲಿ ಬಂದ್..?
* ಹುಬ್ಬಳ್ಳಿ-ಧಾರವಾಡ- ಸಂಪೂರ್ಣ ಬಂದ್
* ಗದಗ – ಸಂಪೂರ್ಣ ಬಂದ್
* ಬಾಗಲಕೋಟೆ- ಸಂಪೂರ್ಣ ಬಂದ್
* ಬೆಳಗಾವಿ- ಬೈಲಹೊಂಗಲ, ಸವದತ್ತಿ, ರಾಮದುರ್ಗ ಬಂದ್
* ವಿಜಯಪುರ- ಭಾಗಶಃ ಬಂದ್
ಏನೇನು ಇರುತ್ತೆ?
ಮೆಡಿಕಲ್ ಸ್ಟೋರ್ ಗಳು, ಆಸ್ಪತ್ರೆಯಲ್ಲಿ ತುರ್ತು ಸೇವೆ, ಎಂದಿನಂತೆ ಹಾಲು ಪೂರೈಕೆ ಇರಲಿದೆ. ಗದಗ, ಬಾಗಲಕೋಟೆ, ಧಾರವಾಡ, ಹುಬ್ಬಳ್ಳಿ, ಬೆಳಗಾವಿಯ ಬೈಲಹೊಂಗಲ ತಾಲೂಕಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆಯಾಗಿದೆ. ಉಳಿದ ಜಿಲ್ಲೆಗಳಲ್ಲಿ ರಜೆ ಘೋಷಣೆಯಾಗಿಲ್ಲ.
ಏನೇನು ಇರಲ್ಲ?
ಅಂಗಡಿ-ಮುಂಗಟ್ಟುಗಳು ಸಂಪೂರ್ಣ ಬಂದ್ ಆಗಲಿದೆ. ಹೋಟೆಲ್‍ಗಳಿಗೆ ಬೀಗ ಬೀಳಲಿದ್ದು ಎಪಿಎಂಸಿ ಚಟುವಟಿಕೆ ಸ್ತಬ್ಧವಾಗಲಿದೆ. ಆಟೋ, ಟ್ಯಾಕ್ಸಿ ಸಂಚಾರ ಸ್ಥಗಿತವಾಗಲಿದೆ. ಸರ್ಕಾರಿ ಬಸ್ ಸೇವೆ ಸ್ಥಗಿತಗೊಳ್ಳಲಿದ್ದು, ಖಾಸಗಿ ಬಸ್ ಸೌಲಭ್ಯಗಳು ಇರುವುದಿಲ್ಲ. ಕೆಲವೊಂದು ಪರೀಕ್ಷೆಗಳು ಮುಂದೂಡಿಕೆಯಾಗಿದೆ.
ಮಹದಾಯಿ ಬಂದ್- ಬುಧವಾರದ ವಿಟಿಯು ಪರೀಕ್ಷೆಗಳು ಮುಂದೂಡಿಕೆ.