ಭುವನೇಶ್ವರ: ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಮಂಗಳವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ, ಪ್ರಮುಖ ನೈಸರ್ಗಿಕ ವಿಕೋಪಗಳ ಹೊಡೆತಕ್ಕೆ ಒಳಗಾದ ರಾಜ್ಯಗಳನ್ನು “ವಿಶೇಷ ಗಮನದ ರಾಜ್ಯ” ಎಂದು ಪರಿಗಣಿಸಿ ಅವುಗಳಿಗೆ ವಿಶೇಷ ಸ್ಥಾನಮಾನದ ರಾಜ್ಯಗಳಿಗೆ ನೀಡುವ ಸವಲತ್ತುಗಳನ್ನು ನಿರ್ದಿಷ್ಟ ಅವಧಿಗೆ ವಿಸ್ತರಿಸಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟಿದ್ದಾರೆ.
ಇತ್ತೀಚೆಗೆ ನಡೆದ ಚುನಾವಣೆಯ ಬಳಿಕ ಉಭಯ ಮುಖಂಡರು ಇದೇ ಮೊದಲ ಬಾರಿಗೆ ಭೇಟಿಯಾದರು. ವಿಶೇಷ ವರ್ಗಕ್ಕೆ ರಾಜ್ಯಗಳನ್ನು ಸೇರಿಸಲು ನೈಸರ್ಗಿಕ ವಿಕೋಪಗಳನ್ನು ಮಾನದಂಡವಾಗಿ ಕೇಂದ್ರ ಸರ್ಕಾರ ಪರಿಗಣಿಸುವವರೆಗೂ ತಮ್ಮ ಬೇಡಿಕೆಯನ್ನು ಒಪ್ಪಿಕೊಳ್ಳುವಂತೆ ನವೀನ್ ಪ್ರಸ್ತಾಪ ಮುಂದಿಟ್ಟರು ಎಂದು ಅಧಿಕೃತ ಮೂಲಗಳು ತಿಳಿಸಿದೆ. ಯಾವುದೇ ರಾಜ್ಯ ವಿಶೇಷ ಗಮನದ ರಾಜ್ಯ ಎಂದು ಪರಿಗಣಿಸಲ್ಪಟ್ಟರೆ, ಅಂಥ ರಾಜ್ಯಗಳು ಕೇಂದ್ರ ಪ್ರಾಯೋಜಿತ ಯೋಜನೆಗಳಿಗೆ 90:10 ಅನುಪಾತದಲ್ಲಿ ಕೇಂದ್ರದಿಂದ ನೆರವು ಪಡೆಯಲು ಸಾಧ್ಯವಾಗುತ್ತದೆ. ಫನಿ ಚಂಡಮಾರುತದಿಂದ ಆಗಿರುವ ಹಾನಿಯಿಂದ ಚೇತರಿಸಿಕೊಳ್ಳಲು 5000 ಕೋಟಿ ರೂಪಾಯಿ ನೆರವು ನೀಡುವಂತೆ ಒಡಿಶಾ ಸಿಎಂ ಆಗ್ರಹಿಸಿದ್ದಾರೆ. ಜತೆಗೆ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ 90:10 ಅನುಪಾತದ ಒಪ್ಪಂದದಂತೆ 5 ಲಕ್ಷ ಗ್ರಾಮೀಣ ಮನೆಗಳನ್ನು ನಿರ್ಮಿಸಿಕೊಡುವಂತೆ ಕೋರಿದ್ದಾರೆ.
“ನಾನು ವಿಶೇಷ ವರ್ಗದ ಸ್ಥಾನಮಾನವನ್ನು ಒಡಿಶಾಗೆ ನೀಡುವಂತೆ ಕೋರಿದ್ದೇನೆ. ಇತ್ತೀಚಿನ ಚಂಡಮಾರುತದ ಹೊಡೆತದಿಂದ ದೊಡ್ಡ ಪ್ರಮಾಣದ ಹಾನಿಯಾಗಿದೆ” ಎಂದು ನವೀನ್ ಮಾಧ್ಯಮಗಳಿಗೆ ವಿವರಿಸಿದರು. ಫನಿ ಚಂಡಮಾರುತದಿಂದ ಆಗಿರುವ ಹಾನಿ ಬಗ್ಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೂ ಒಡಿಶಾ ಸಿಎಂ ವಿವರ ನೀಡಿದರು.