ಪುತ್ತೂರಿನ ಐತಿಹಾಸಿಕ ಗಾಂಧಿ ಕಟ್ಟೆಯನ್ನು ಪುನರ್ ನಿರ್ಮಿಸಿ ಅಭಿವೃದ್ಧಿಗೊಳಿಸುವ ನಗರಸಭೆಯ ಯೋಜನೆಗೆ ಹೈಕೋರ್ಟ್‍ನಲ್ಲಿ ಸಲ್ಲಿಕೆಯಾಗಿರುವ ತಡೆಯಾಜ್ಞೆ ತಡೆಯಾಗಿ ಪರಿಣಮಿಸಿದೆ.
ನಗರದ ಹೃದಯಭಾಗದ ಬಸ್ ನಿಲ್ದಾಣದ ಬಳಿ ಇರುವ ಗಾಂಧಿ ಕಟ್ಟೆ ಹಾಗೂ ಗಾಂಧೀಜಿಯವರ ಪ್ರತಿಮೆಯನ್ನು ಮಾ. 17ರಂದು ತಾತ್ಕಾಲಿಕವಾಗಿ ತೆರವುಗೊಳಿಸಲಾಗಿತ್ತು. ರಸ್ತೆಗೆ ಸಮಾನಾಂತರವಾಗಿ ಕೆಳ ಭಾಗದಲ್ಲಿ ಮರು ನಿರ್ಮಿಸುವ ಉದ್ದೇಶದಿಂದ ಸ್ಥಳೀಯಾಡಳಿತ ನಗರಸಭೆ ಈ ಕ್ರಮ ಕೈಗೊಂಡಿತು.
ಈ ಜಾಗದ ಅಭಿವೃದ್ಧಿಯ ದೃಷ್ಟಿಯಿಂದ ನಗರಸಭೆಯಿಂದ 8 ಲಕ್ಷ ರೂ. ವೆಚ್ಚದ ಯೋಜನೆಯನ್ನು ಹಾಕಿಕೊಂಡಿತ್ತು. ಗಾಂಧಿಕಟ್ಟೆಯನ್ನು ರಸ್ತೆಗೆ ಸಮಾನಾಂತರವಾಗಿ ಕೆಳಭಾಗಕ್ಕೆ ಮರು ನಿರ್ಮಿಸುವುದು ಮತ್ತು ಅಶ್ವತ್ಥ ಮರಕ್ಕೆ ಸುತ್ತಲೂ ಭದ್ರವಾದ ಕಟ್ಟೆ ಕಟ್ಟುವ ಯೋಜನೆಯನ್ನು ನಗರಸಭೆ ಕೈಗೊಂಡಿತ್ತು. ಅಶ್ವತ್ಥ ಮರಕ್ಕೆ ಹಾನಿಯಾಗದಂತೆ ಪೂರಕ ವ್ಯವಸ್ಥೆಗಳನ್ನು ಕೈಗೊಳ್ಳುವ ಅಂದಾಜನ್ನು ನಗರಸಭೆ ರೂಪಿಸಿತ್ತು. ಅಬ್ದುಲ್ ರಝಾಕ್ ಎನ್ನುವವರು ಗುತ್ತಿಗೆ ವಹಿಸಿಕೊಂಡಿದ್ದರು.
ಬನ್ನೂರು ನಿವಾಸಿ ಚಂದ್ರಶೇಖರ ಪಾಟಾಳಿ ಅವರು ಈ ಕಾಮಗಾರಿಯ ವಿರುದ್ಧ ಹೈಕೋರ್ಟ್‍ನಿಂದ ತಡೆಯಾಜ್ಞೆ ತಂದಿದ್ದಾರೆ. ಸಾರ್ವಜನಿಕ ಕಾಮಗಾರಿಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ತೀರ್ಪೊಂದನ್ನು ಆಧಾರವಾಗಿಟ್ಟುಕೊಂಡು ರಸ್ತೆ ಬದಿ ಗಾಂಧಿಕಟ್ಟೆ ನಿರ್ಮಾಣ ಮತ್ತು ಅಶ್ವತ್ಥ ಕಟ್ಟೆ ಅಭಿವೃದ್ಧಿ ಕಾಮಗಾರಿಗೆ ತಡೆಯಾಜ್ಞೆ ತರಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ನಗರಸಭಾ ಆಡಳಿತಾಧಿಕಾರಿ ಹಾಗೂ ಜಿಲ್ಲಾಧಿಕಾರಿಯನ್ನು ಪ್ರತಿವಾದಿಯನ್ನಾಗಿ ಮಾಡಲಾಗಿದೆ.
ನ್ಯಾಯಾಲಯದಿಂದ ತಡೆಯಾಜ್ಞೆಯಾದ ಬಳಿಕ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿದೆ. ಅನಂತರದಲ್ಲಿ ಹೈಕೋರ್ಟ್‍ಗೆ ಬೇಸಗೆ ರಜೆ ಇದ್ದ ಕಾರಣ ತಡೆಯಾಜ್ಞೆ ತೆರವಿಗೆ ವಿಳಂಬವಾಗಿದೆ. ಈಗ ರಜೆ ಮುಗಿದಿರುವ ಹಿನ್ನೆಲೆಯಲ್ಲಿ ನಗರಸಭೆಯ ಸ್ಥಳೀಯ ನ್ಯಾಯವಾದಿ ಯು.ಎಸ್. ನಾಗರಾಜ್ ನೇತೃತ್ವದಲ್ಲಿ ನಗರಸಭೆಯ ಕಡೆಯಿಂದ ನ್ಯಾಯಾಲಯಕ್ಕೆ ಅಗತ್ಯ ದಾಖಲೆಗಳನ್ನು ನೀಡಲಾಗಿದ್ದು, ಶೀಘ್ರ ತಡೆಯಾಜ್ಞೆ ತೆರವಿಗೆ ಪ್ರಯತ್ನ ನಡೆಸಲಾಗುತ್ತಿದೆ ಎಂದು ನಗರಸಭಾ ಅಧಿಕಾರಿಗಳು ತಿಳಿಸಿದ್ದಾರೆ.